ಸಾರಾಂಶ
ಭಟ್ಕಳ: ಸುಮಾರು ೨೯ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಬೇಟೆಗಾರ ಸಿನಿಮಾದಲ್ಲಿನ ದೃಶ್ಯವೊಂದರಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿ ಅವಮಾನ ಮಾಡಿದ್ದು, ಚಿತ್ರ ನಿರ್ಮಾಪಕರು ಮತ್ತು ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುರ್ಡೇಶ್ವರದ ಸತೀಶ ನಾಯ್ಕ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ದೂರದರ್ಶನದಲ್ಲಿ ಸಿನಿಮಾವನ್ನು ಇತ್ತೀಚೆಗೆ ಮನೆಯಲ್ಲಿ ನೋಡುತ್ತಿರುವಾಗ ನನ್ನ ಮಗಳು ಮಾನ್ಯ, ರಾಷ್ಟ್ರಧ್ವಜ ತಲೆಕೆಳಗಾಗಿ ಐಜಿಪಿ ಟೇಬಲ್ ಮೇಲೆ ಇಟ್ಟಿರುವ ದೃಶ್ಯವನ್ನು ನನಗೆ ತಿಳಿಸಿದಳು. ನಂತರ ದೃಶ್ಯವನ್ನು ನೋಡಿದಾಗ ರಾಷ್ಟ್ರಧ್ವಜವನ್ನು ಸ್ಪಷ್ಟವಾಗಿ ತಲೆಕೆಳಗಾಗಿ ಇಟ್ಟಿರುವುದು ಗೋಚರಿಸುತ್ತಿದ್ದು, ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಸಿನಿಮಾವನ್ನು ನೋಡಿದ್ದು, ಎಲ್ಲದರಲ್ಲೂ ರಾಷ್ಟ್ರಧ್ವಜ ತಲೆಕೆಳಗಾದ ೧ ನಿಮಿಷ ೧೩ ಸೆಕೆಂಡ್ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.ದೂರಿನ ಜತೆ ರಾಷ್ಟ್ರಧ್ವಜ ತಲೆಕೆಳಗಾಗಿರುವ ೧ ನಿಮಿಷ ೧೩ ಸೆಕೆಂಡ್ ಚಿತ್ರೀಕರಣದ ವಿಡಿಯೋ ತುಣುಕಿನ ದೃಶ್ಯವನ್ನು ಕೂಡಾ ನೀಡಿದ್ದಾರೆ.ಅಂಕೋಲಾದಲ್ಲಿ ನಾಗಮೂರ್ತಿ ನಾಪತ್ತೆ!
ಅಂಕೋಲಾ: ಶುಕ್ರವಾರ ಎಲ್ಲೆಡೆ ನಾಗರಪಂಚಮಿಯ ಸಂಭ್ರಮ ಒಂದೆಡೆಯಾದರೆ ಇನ್ನೊಂದಡೆ ನಾಗಾರಾಧೆನೆಗಾಗಿ ಭಕ್ತರು ಪೂಜಿಸಲು ಬಂದರೆ ನಾಗಮೂರ್ತಿಯೆ ನಾಪತ್ತೆಯಾಗಿರುವ ಹಿನ್ನೆಲೆ ಆರಾಧಕರು ನಿರಾಶೆಯಿಂದ ವಾಪಸ್ ತೆರಳಿದ ಘಟನೆ ಇಲ್ಲಿಯ ಗುಡಿಗಾರಗಲ್ಲಿಯಲ್ಲಿ ನಡೆದಿದೆ.ಪಟ್ಟಣದ ಗುಡಿಗಾರಗಲ್ಲಿಯ ಫಾನ್ಸಿಸ್ ಫರ್ನಾಂಡಿಸ್ ಅವರ ಮನೆಯ ಹಿಂಬದಿಯಲ್ಲಿ ಸುಮಾರು ೪೫೦ ವರ್ಷಗಳ ಇತಿಹಾಸವಿರುವ ನಾಗ ಹಾಗೂ ಚೌಡೇಶ್ವರಿ ಸೇರಿದಂತೆ ಶಾಸನವಿರುವ ಎರಡು ಮೂರ್ತಿಗಳು ಇದ್ದವು. ನಾಗಪಂಚಮಿಯಂದು ಇಲ್ಲಿ ಅನೇಕ ಭಕ್ತರು ಬಂದು ಪೂಜೆ ಸಲ್ಲಿಸುತ್ತಿದ್ದರು. ಮೆಕ್ಯಾನಿಕ್ ಆಗಿರುವ ಮಂಜುನಾಥ ನಾರಾಯಣ ನಾಯ್ಕ ಮಂಜಗುಣಿ ಅವರು ನಾಗರ ಪಂಚಮಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಿದ್ದರು.ನಾಗಪಂಚಮಿಯ ಹಿನ್ನೆಲೆ ಬುಧವಾರ ಮೂರ್ತಿಯನ್ನು ಸ್ವಚ್ಛಗೊಳಿಸಿ ತೆರಳಿದ್ದರು. ಆದರೆ ಶುಕ್ರವಾರ ಪೂಜೆಗೆಂದು ಭಕ್ತರು ಬಂದಾಗ ಅಲ್ಲಿನ ವಿಗ್ರಹಗಳು ನಾಪತ್ತೆಯಾಗಿದ್ದರಿಂದ ಭಕ್ತರು ಆತಂಕಕ್ಕೆ ಒಳಗಾದರು.
ಈ ನಾಗಮೂರ್ತಿ ಇದ್ದ ಸ್ಥಳವು ಅನ್ಯಕೋಮಿನ ಸಮುದಾಯದ ಸ್ಥಳದಲ್ಲಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಅಂಕೋಲಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹಿಂದು ಕಾರ್ಯಕರ್ತರು ಮುಂದಾಗಿದ್ದಾರೆ. ನಾಗ ಮೂರ್ತಿಯ ವಿಗ್ರಹ ನಾಪತ್ತೆಯಾಗಿರುವ ವಿದ್ಯಮಾನವು ತೀವ್ರ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.