ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಕರ್ನಾಟಕದಲ್ಲಿ ಇತ್ತೀಚೆಗೆ ಇಂಜಿನಿಯರ್ ಹಾಗು ಗುತ್ತಿಗೆದಾರ ಅವಮಾನಿಸುವ ನಡೆಗಳ ಬಗ್ಗೆ ದೂರುಗಳು ದಾಖಲಾಗುತ್ತಿರುವುದು ಖಂಡನೀಯವೆಂದು ಅಪರಾಧ ಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕ ಡಾ. ನಟರಾಜ್ ಹೇಳಿದರು.ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ 164 ನೇ ಜನ್ಮ ದಿನದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಪ್ರಾಕ್ಟಿಸಿಂಗ್ ಆರ್ಕಿಟೆಕ್ಟ್ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 6ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ವಿಶ್ವವೇ ಜ್ಞಾಪಿಸಿಕೊಳ್ಳುವಂತಹ ಕೊಡುಗೆ ನೀಡಿರುವುದರಿಂದ ಇಂದಿಗೂ ಎಲ್ಲರ ಮನದಲ್ಲಿ ಸ್ಮರಣೀಯವಾಗಿ ಉಳಿದಿದ್ದಾರೆ. ಅವರ ಹುಟ್ಟುಹಬ್ಬವನ್ನು ಇಂಜಿನಿಯರ್ಸ್ ಡೇ ಯನ್ನಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ಶಿಕ್ಷಕರಾಗಿ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜಯಂತಿಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿರುವುದರಲ್ಲಿ ವಿಶೇಷತೆಯಿದೆ ಎಂದು ಹೇಳಿದರು.ಸರ್ ಎಂ. ವಿಶ್ವೇಶ್ವರಯ್ಯನವರ ಪೂರ್ವಜರು ಆಂಧ್ರದಿಂದ ಕರ್ನಾಟಕಕ್ಕೆ ಬಂದು ಪೂಜೆ, ಪುನಸ್ಕಾರ ಮಾಡಿಕೊಂಡು ಜೀವಿಸುತ್ತಿದ್ದರು. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ವಿಶ್ವೇಶ್ವರಯ್ಯನವರು ಇಂಜಿನಿಯರ್ ಆಗಿ ದೇಶ ಮರೆಯಲಾರದಂತಹ ಕೊಡುಗೆ ಕೊಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ನೀರಾವರಿ ಯೋಜನೆಗಳನ್ನು ಕೈಗೊಳ್ಳಬೇಕಾದರೆ ಸರ್.ಎಂ. ವಿಶ್ವೇಶ್ವರಯ್ಯನವರ ಸಲಹೆ ಪಡೆದುಕೊಳ್ಳಲಾಗುತ್ತಿತ್ತು ಎಂದು ತಿಳಿಸಿದರು.
ಒಂದು ಕಟ್ಟಡ, ಅಣೆಕಟ್ಟೆ ಕಟ್ಟಿದರೆ ಅದು ಎಷ್ಟು ಕಾಲ ಬಾಳಿಕೆ ಬರಬಹುದೆಂಬ ದೂರದೃಷ್ಟಿ ಅವರಲ್ಲಿತ್ತು. ತಮಿಳುನಾಡು-ಕರ್ನಾಟಕದ ನಡುವೆ ಇಂದಿಗೂ ಕಗ್ಗಂಟಾಗಿ ಉಳಿದಿರುವ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಬ್ರಿಟೀಷರ ತಾರತಮ್ಯವನ್ನು ದಾಖಲೆ ಸಮೇತ ಸರ್.ಎಂ. ವಿಶ್ವೇಶ್ವರಯ್ಯನವರು ವಿರೋಧಿಸಿದ್ದರು ಎಂದರು.ಸಿಡಿಪೇಸ್ ಅಧ್ಯಕ್ಷ ಎಸ್. ಎಸ್. ಪ್ರಸಾದ್ ಮಾತನಾಡಿ ಯಾವುದೇ ಒಂದು ಯೋಜನೆ ಯಶಸ್ವಿಯಾಗಬೇಕಾದರೆ ಕ್ವಾಲಿಫೈಡ್ ಇಂಜಿನಿಯರ್‌ಗಳಿರಬೇಕು. ಹಾಗಾಗಿ ಹೊಸಬರಿಗೆ ಪ್ರೇರಣೆಯಾಗಬೇಕೆಂಬುದು ನಮ್ಮ ಉದ್ದೇಶ. ಆರು ವರ್ಷಗಳಿಂದ ಇಂಜಿನಿಯರ್ಸ್ ಡೇ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.ಜತೆಗೆ ತಾಂತ್ರಿಕವಾಗಿ ಅವಶ್ಯವಿರುವ ಕಾರ್ಯಕ್ರಮ, ಕಟ್ಟಡ ಸಾಮಾಗ್ರಿಗಳ ಪ್ರದರ್ಶನ ಕೂಡ ಪ್ರತಿ ವರ್ಷವೂ ಇರುತ್ತದೆ. ಹೊಸ ಯೋಜನೆಗಳ ಮಾಹಿತಿ, ನೂನ್ಯತೆ ಬಗ್ಗೆ ಚರ್ಚಿಸಿ ಕಮಿಟಿ ರಚಿಸಿ, ನಾನ್ ಟೆಕ್ನಿಕಲ್ ಹ್ಯಾಂಡ್‌ಗಳು ಜಾಸ್ತಿಯಾಗುತ್ತಿರುವುದನ್ನು ತಡೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆಂದು ತಿಳಿಸಿದರು.
ಸಿಡಿಪೇಸ್ ಕಾರ್ಯದರ್ಶಿ ಮಾದವ್ ಎಂ. ಪೊಕಾಳೆ, ಜೆಎಸ್ ಡಬ್ಲು. ಜನರಲ್ ಮ್ಯಾನೇಜರ್ ರಾಮಚಂದ್ರಪ್ಪ, ಅಬ್ದುಲ್ ಗಫಾರ್, ದಿವಾಕರ್ ಎಂ.ವಿ ವೇದಿಕೆಯಲ್ಲಿದ್ದರು. ಶ್ರೀಕಾಂತ್ ಪ್ರಾರ್ಥಿಸಿದರು. ಹರೀಶ್ ಸ್ವಾಗತಿಸಿದರು. ಶಶಿಧರ್ ಗುಪ್ತ ನಿರೂಪಿಸಿದರು. ಸಿವಿಲ್ ಇಂಜಿನಿಯರ್‌ಗಳಾದ ಎಂ.ಕೆ. ರವೀಂದ್ರ, ಪಿ.ಎಲ್. ಸುರೇಶ್‌ರಾಜು, ಆರ್ಕಿಟೆಕ್ಟ್ ಸುಜಾತ ಸೇರಿದಂತೆ ಅನೇಕ ಇಂಜಿನಿಯರ್‌ಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.