ಸಾರಾಂಶ
ಬೆಂಗಳೂರು : ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ನಿಂದನಾತ್ಮಕ ಹೇಳಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸಿತು.
ಬುಧವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ನ ಬೆಂಗಳೂರು ನಗರ ಘಟಕ ಅಧ್ಯಕ್ಷ ರಮೇಶ್‌ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಯಿತು. ಈ ವೇಳೆ ಜಮೀರ್ ಅಹ್ಮದ್ ಖಾನ್ ಅವರ ಮನೆಗೆ ಮುತ್ತಿಗೆ ಹಾಕಲೆಂದು ತೆರಳಲು ಮುಂದಾದಾಗ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಗೌಡ, ಚನ್ನಪಟ್ಟಣ ಉಪಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಜನಾಂಗೀಯ ನಿಂದನೆ ಮಾಡಿದ್ದಾರೆ. ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಜತೆ ಹೋಗಿದ್ದ ವೇಳೆ ಜಮೀರ್ ಅವರನ್ನು ಮಾರ್ಷಲ್‌ಗಳು ತಡೆದಿದ್ದರು. ಆಗ ಸವಾಲು ಹಾಕಿ ಅವರನ್ನು ಶಾಸಕರನ್ನಾಗಿ ಮಾಡಿ ಕರೆದುಕೊಂಡು ಹೋದರು. ಇಂತಹ ಜಮೀರ್ ಅಹ್ಮದ್ ಈಗ ದೇವೇಗೌಡ ಕುಟುಂಬವನ್ನು ಖರೀದಿ ಮಾಡುತ್ತೇನೆ ಎನ್ನುತ್ತಿರುವುದು ಅವರ ದುರಂಹಕಾರ ತೋರಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಜಮೀರ್‌ಗೆ ಮನಬಂದಂತೆ ಬೈಯಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಕನಿಷ್ಠ ಮರ್ಯಾದೆ ಇದ್ದರೆ ಜಮೀರ್ ಅಹ್ಮದ್ ಅವರ ರಾಜೀನಾಮೆಯನ್ನು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಜಮೀರ್ ಅಹ್ಮದ್ ರಾಜೀನಾಮೆ ಪಡೆಯದಿದ್ದರೆ ಅವರ ಎಲ್ಲಿ ಹೋದರೂ ಪ್ರತಿಭಟನೆ ನಡೆಸಲಾಗುವುದು. ಅವರ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಮತ್ತು ರಾಜಭವನಕ್ಕೆದೂರು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.