ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಬಿಹಾರದಲ್ಲಿ ಕಾಂಗ್ರೆಸ್ ಒಕ್ಕೂಟದ ಪ್ರಮುಖರು ಪ್ರಧಾನಿಯವರ ತಾಯಿ ಬಗ್ಗೆ ಅವಹೇಳನ ಮಾತನಾಡಿದ್ದು ಖಂಡಿನೀಯ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಿಹಾರದಲ್ಲಿ ಕಾಂಗ್ರೆಸ್ ಒಕ್ಕೂಟದ ಪ್ರಮುಖರು ಪ್ರಧಾನಿಯವರ ತಾಯಿ ಬಗ್ಗೆ ಅವಹೇಳನ ಮಾತನಾಡಿದ್ದು ಖಂಡಿನೀಯ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಒಕ್ಕೂಟದ ಪ್ರಮುಖರು ದೇಶದ ಪ್ರಮುಖರಾದ ಮೋದಿ ಅವರ ತಾಯಿಗೆ ಮಾತನಾಡುವುದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು, ಹೀಗೆ ಅವಹೇಳನಕಾರಿಯಾಗಿ ಮಾತನಾಡುವುದು ಮುಂದುವರೆಸಿದರೆ ಕಾಂಗ್ರೆಸ್ ಒಕ್ಕೂಟವನ್ನು ದೇಶದಲ್ಲಿ ರಸ್ತೆಗೆ ಇಳಿಯದಂತೆ ನಿರ್ಬಂದ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಮೈಸೂರಿನ ಮುಕ್ತ ವಿವಿಯಲ್ಲಿ ಒಂದೇ ಸಮುದಾಯಕ್ಕೆ ಉಚಿತ ಸೌಲಭ್ಯ ನೀಡಿ, ಓಲೈಕೆ ಮಾಡಿದೆ. ಎಸ್ಸಿ, ಎಸ್ಟಿ, ಬಡಜನರು ನಿಮಗೆ ಕಾಣುತ್ತಿಲ್ಲವೇ?. ಕಾಂಗ್ರೆಸ್‌ನಲ್ಲಿರುವ ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯದ ಮಂತ್ರಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಪ್ರಶ್ನಿಸಬೇಕಿದೆ. 120ಕ್ಕೂ ಅಧಿಕ ಪದವಿ ಕಾಲೇಜುಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಗೆ ಪ್ರತ್ಯೇಕ ವಿವಿ ಕೊಡದೆ, ಕೇವಲ 90 ಪದವಿ ಕಾಲೇಜುಗಳಿರುವ ಬಾಗಲಕೋಟೆಗೆ ವಿವಿ ಕೊಟ್ಟಿದ್ದೀರಿ. ಹೀಗೆಯೇ ಅನ್ಯಾಯ ಮುಂದುವರೆದರೆ ಹಾಗೂ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗದಿದ್ದರೆ ಚಳಿಗಾಲದ ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ, ಎಸ್ಸಿ, ಎಸ್ಟಿ ಮೋರ್ಚಾದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರವಿಕಾಂತ ವಗ್ಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ವಾಲ್ಮಿಕಿ ನಿಗಮದಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ. ಪ್ರತಿ ಕ್ಷೇತ್ರದಲ್ಲಿ 20ರಿಂದ 25 ಸಾವಿರ ಜನಸಂಖ್ಯೆ ಇರುವ ತಳವಾರ ಸಮಾಜ ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಇದ್ದೇವೆ. ಆದರೂ ಅನುದಾನದಲ್ಲಿ ತಾರತಮ್ಯ ಮಾಡುವುದು, ಸಮಾಜಕ್ಕೆ ತೊಂದರೆ ಕೊಡುವ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದರು