ವಿಮಾ ಮೊತ್ತ, ಪರಿಹಾರ ಧನದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

| Published : Dec 17 2023, 01:45 AM IST

ವಿಮಾ ಮೊತ್ತ, ಪರಿಹಾರ ಧನದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಲೀಡ್ ಬ್ಯಾಂಕ್‍ (ಡಿಎಲ್‍ಆರ್ ಸಿ) ಸಭೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಅಧ್ಯಕ್ಷತೆಯಲ್ಲಿ ನಡೆಯಿತು. ರೈತರಿಗೆ ನೀಡುವ ವಿಮಾ ಮೊತ್ತ, ಪರಿಹಾರ ಧನದ ಮೊತ್ತ ಸಾಲಕ್ಕೆ ಹೊಂದಾಣಿಕೆ ಮಾಡಬಾರದು, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸಹಾಯಧನ, ಸಾಲ ಸೌಲಭ್ಯ ಮಂಜೂರಾತಿಯಲ್ಲಿ ಅರ್ಹ ಬ್ಯಾಂಕ್ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಲೀಡ್‌ ಬ್ಯಾಂಕ್‌ ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಸೂಚನೆ

ಗದಗ: ರೈತರಿಗೆ ನೀಡುವ ವಿಮಾ ಮೊತ್ತ, ಪರಿಹಾರ ಧನದ ಮೊತ್ತ ಸಾಲಕ್ಕೆ ಹೊಂದಾಣಿಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.

ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಲೀಡ್ ಬ್ಯಾಂಕ್‍ (ಡಿಎಲ್‍ಆರ್ ಸಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸಹಾಯಧನ, ಸಾಲ ಸೌಲಭ್ಯ ಮಂಜೂರಾತಿಯಲ್ಲಿ ಅರ್ಹ ಬ್ಯಾಂಕ್ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ ಬ್ಯಾಂಕ್ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ. ಬ್ಯಾಂಕ್‍ಗಳಲ್ಲಿ ಹಿರಿಯ ನಾಗರಿಕರಿಗೆ ಹಾಗೂ ದಿವ್ಯಾಂಗರಿಗೆ ಮಾನವೀಯ ದೃಷ್ಟಿಯಿಂದ ಸೌಜನ್ಯಯುತ ನಡುವಳಿಕೆ ಮೂಲಕ ಬ್ಯಾಂಕ್ ಸೇವೆ ಒದಗಿಸಲು ಮುಂದಾಗಬೇಕು ಎಂದರು. ಲೀಡ್ ಬ್ಯಾಂಕ್‍ನ ಮ್ಯಾನೇಜರ್ ಜಬ್ಬಾರ್ ಅಹ್ಮದ ಮಾತನಾಡಿ, ಜಿಲ್ಲೆಯ ಸಾಲ ಠೇವಣಿ ಅನುಪಾತ ಸೆಪ್ಟೆಂಬರ್ 31 ರವರೆಗೆ 98.30% ಆಗಿದೆ. ಎಲ್ಲ ಬ್ಯಾಂಕಿನ ನಿಯಂತ್ರಣಾಧಿಕಾರಿಗಳು ಶಾಖೆವಾರು ಸಾಲ ಠೇವಣಿ ಅನುಪಾತವನ್ನು ಕೂಲಂಕುಷವಾಗಿ ಪರಿಶೀಲಿಸಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ.

ಜಿಲ್ಲೆಯಲ್ಲಿ ಸೆಪ್ಟೆಂಬರ್ 2023ರ ಅಂತ್ಯದವರೆಗೆ ಒಟ್ಟು ಆದ್ಯತಾ ವಲಯಕ್ಕೆ ಶೇ 43.35ರಷ್ಟು ಸಾಲ ನೀಡಿಕೆಯಲ್ಲಿ ಗುರಿ ಸಾಧಿಸಿದೆ. ಗದಗನಲ್ಲಿ ಶೇ 36.96, ಗಜೇಂದ್ರಗಡದಲ್ಲಿ ಶೇ 51.94, ಲಕ್ಷ್ಮೇಶ್ವರದಲ್ಲಿ ಶೇ 55.14, ಮುಂಡರಗಿಯಲ್ಲಿ ಶೇ 45.63, ನರಗುಂದದಲ್ಲಿ ಶೇ 69.85, ರೋಣದಲ್ಲಿ ಶೇ 38.69, ಶಿರಹಟ್ಟಿಯಲ್ಲಿ ಶೇ 54.81 ರಷ್ಟು ಗುರಿ ಸಾಧಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮುದ್ರಾ ಸಾಲ ಯೋಜನೆಯಡಿ ಶಿಶು ಯೋಜನೆಯಲ್ಲಿ 22849 ಅರ್ಜಿಗಳನ್ನು ಸ್ವೀಕರಿಸಿ 5651.52 ಲಕ್ಷ, ಕಿಶೋರ ಯೋಜನೆಯಡಿ 22838 ಅರ್ಜಿಗಳನ್ನು ಸ್ವೀಕರಿಸಿ 26109.17 ಲಕ್ಷ ಹಾಗೂ ತರುಣ ಯೋಜನೆಯಡಿ 1793 ಅರ್ಜಿಗಳನ್ನು ಸ್ವೀಕರಿಸಿ 11802.11 ಲಕ್ಷ ಹೀಗೆ ಒಟ್ಟು 47120 ಅರ್ಜಿಗಳನ್ನು ಸ್ವೀಕರಿಸಿ 43562.80 ಲಕ್ಷ ವಿತರಣೆಯಾಗಿದೆ. ಉದ್ಯೋಗಿನಿ ಯೋಜನೆಯಡಿ 20 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ.

ಕೇಂದ್ರ ಪುರಸ್ಕೃತ ಯೋಜನೆಗಳಾದ ಪ್ರಧಾನಮಂತ್ರಿ ಜನಧನಯೋಜನೆ, ಸಾಮಾಜಿಕ ಭದ್ರತಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ಎಸಿಪಿ (Annual Credit Plan) ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಸೇರಿದಂತೆ ವಿವಿಧ ಬ್ಯಾಂಕ್ ನಿಯಂತ್ರಣಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.