ಸಾರಾಂಶ
ಜಾನುವಾರಗಳ ವಿಮೆ ಮಾಡಿದ ಹಾಲು ಉತ್ಪಾದಕರಿಗೆ ಇಂದು ವಿಮಾ ಪರಿಹಾರವನ್ನು ವಿತರಿಸಲಾಗುತ್ತಿದೆ.
ಹಳಿಯಾಳ: ಜಾನುವಾರ ಆಕ್ಮಸಿಕ ಸಾವಿನಿಂದ ನೊಂದ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಧಾರವಾಡದ ಹಾಲು ಒಕ್ಕೂಟದಿಂದ ಜಾನುವಾರಗಳ ಮೃತ ಪರಿಹಾರ ವಿಮಾ ಹಣ ವಿತರಿಸಲಾಯಿತು.ಶನಿವಾರ ಪಟ್ಟಣದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂತ್ರಸ್ತ ಹಾಲು ಉತ್ಪಾದಕರಿಗೆ ವಿಮಾ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಧಾರವಾಡ ಹಾಲು ಒಕ್ಕೂಟದ ಪ್ರಮುಖರಾದ ಶಂಕರ ಹೆಗಡೆ, ಜಾನುವಾರಗಳನ್ನು ಸಾಕಿದರೆ ಸಾಲದು. ಅವುಗಳ ವಿಮೆ ಮಾಡಲು ಮರೆಯಬಾರದು ಎಂದರು.
ಜಾನುವಾರಗಳ ವಿಮೆ ಮಾಡಿದ ಹಾಲು ಉತ್ಪಾದಕರಿಗೆ ಇಂದು ವಿಮಾ ಪರಿಹಾರವನ್ನು ವಿತರಿಸಲಾಗುತ್ತಿದೆ. ಹಾಲು ಉತ್ಪಾದಕರು ಹೈನುಗಾರಿಕೆ ವೃತ್ತಿಯಲ್ಲಿ ತೊಡಗಿದ ರೈತರು ಮಹಾ ಮಂಡಳದಿಂದ ನೀಡುವ ವಿವಿಧ ಹೈನುಗಾರಿಕಾ ಸೌಲಭ್ಯಗಳ ಸದುಪಯೋಗ ಪಡೆಯಬೇಕು. ಹೈನುಗಾರಿಕೆಗೆ ಸಂಬಂಧಿಸಿದ ಯಾವುದೇ ತರಬೇತಿ ಮಾಗದರ್ಶನ ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಹಳಿಯಾಳದ ಹಾಲು ಉತ್ಪಾದಕರ ಮಹಿಳಾ ಸಂಘದ ಸದಸ್ಯೆ ಅನಿತಾ ತೋರಸ್ಕರ ಅವರ ಆಕಳು ಸಾವಿಗೀಡಾದ ಹಿನ್ನೆಲೆಯಲ್ಲಿ ₹42 ಸಾವಿರ, ಕಾಳಗಿನಕೊಪ್ಪ ಸೊಸೈಟಿಯ ರಮೇಶ ದೊಡ್ಡಗೌಡರ ಅವರಿಗೆ ₹30 ಸಾವಿರ ವಿಮಾ ಪರಿಹಾರದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ವ್ಯವಸ್ಥಾಪಕ ಡಾ.ಶಿವಗೌಡರ ಬಸನ್ಣಗೌಡರ, ವಿಸ್ತರಣಾಧಿಕಾರಿ ವಿನಾಯಕ ಬೇವಿನಕಟ್ಟಿ, ಹಳಿಯಾಳದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಬೆಂಡಿಗೇರಿಮಠ, ಉಪಾಧ್ಯಕ್ಷೆ ನಿಮಲಾ ಕೊಕೀತ್ಕರ, ಕಾರ್ಯದರ್ಶಿ ಪುಷ್ಪಾ ದೇಸಾಯಸ್ವಾಮಿ, ಮಹೇಶ ತೋರಸ್ಕರ, ಸಂಗಮನಾಥ ಬೆಂಡಿಗೇರಿಮಠ, ಆನಂದ ಕೋಕಿತ್ಕರ, ಚನ್ನಬಸವ ದೇಸಾಯಸ್ವಾಮಿ ಇದ್ದರು.