ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿಯೂ ಕೃಷಿ ವಿಶ್ವವಿದ್ಯಾಲಯಗಳಿವೆ. ಈ ಭಾಗದ ರೈತರು ನಿರ್ಲಕ್ಷ್ಯ ತೋರದೆ ಕೃಷಿ ವಿಜ್ಞಾನಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಮಳೆ ಮತ್ತು ಹವಾಮಾನಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆ ಮಾಡುವ ಜೊತೆಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರೈತರು ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳೊಂದಿಗೆ ಸಂಪರ್ಕದಲ್ಲಿದ್ದು ವೈಜ್ಞಾನಿಕ ಕೃಷಿ ಪದ್ಧತಿಯ ಜೊತೆಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿದರೆ ಬರಗಾಲದಂತಹ ಸಂದರ್ಭದಲ್ಲಿ ಸಂಕಷ್ಟದಿಂದ ಪಾರಾಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಗಂಗಸಮುದ್ರ ಗ್ರಾಮದ ರೈತ ದೇವರಾಜು ಅವರ ಜಮೀನಿಗೆ ಜಿಲ್ಲಾಡಳಿತದ ಅಧಿಕಾರಿಗಳ ತಂಡದೊಂದಿಗೆ ಸೋಮವಾರ ಭೇಟಿ ಕೊಟ್ಟು, ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಅಲಸಂದೆ ಬೆಳೆಯ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ ರೈತರು ಹಾಗೂ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದ ಬಳಿಕ ಮಾತನಾಡಿದರು.

ದಾವಣಗೆರೆಯಿಂದ ಉತ್ತರ ಕರ್ನಾಟಕ ಭಾಗದವರೆಗಿನ ರೈತರು ಯಾವುದೇ ಬೆಳೆ ಬೆಳೆಯುವ ಸಂದರ್ಭದಲ್ಲಿ ಜಾಗೃತರಾಗುತ್ತಾರೆ. ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳುವ ಜೊತೆಗೆ ಮಳೆ ಕಡಿಮೆಯಾದಾಗ ಅಥವಾ ಗೊಬ್ಬರದ ಕೊರತೆ ಎದುರಾದ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕೆಂದು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಲಹೆ ಪಡೆಯುತ್ತಾರೆ. ಆದರೆ, ಹಳೆ ಮೈಸೂರು ಭಾಗದ ರೈತರು ಪೂರ್ವಿಕರ ಶೈಲಿಯ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನೇ ಅನುಸರಿಸುತ್ತಿದ್ದು ಇದು ಕೂಡ ನಷ್ಟ್ಟಕ್ಕೆ ಕಾರಣವಾಗುತ್ತಿದೆ ಎಂದರು.

ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿಯೂ ಕೃಷಿ ವಿಶ್ವವಿದ್ಯಾಲಯಗಳಿವೆ. ಈ ಭಾಗದ ರೈತರು ನಿರ್ಲಕ್ಷ್ಯ ತೋರದೆ ಕೃಷಿ ವಿಜ್ಞಾನಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಮಳೆ ಮತ್ತು ಹವಾಮಾನಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆ ಮಾಡುವ ಜೊತೆಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಕೃಷಿ ಇಲಾಖೆಯಿಂದ ಬೆಳೆ ವಿಮೆ ಕುರಿತಾಗಿ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಮುಖ್ಯಮಂತ್ರಿಗಳ ನಿರ್ದೇಶನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಬರ ಅಧ್ಯಯನ ನಡೆಯುತ್ತಿದೆ. ಜಿಲ್ಲೆಯಲ್ಲಿಯೂ ಕೂಡ ಈಗಾಗಲೇ ೫ ತಾಲೂಕುಗಳಿಗೆ ಭೇಟಿ ಕೊಟ್ಟು ೧೨ ಸ್ಥಳ ವೀಕ್ಷಣೆ ಮಾಡಿ ವಸ್ತು ಸ್ಥಿತಿಯ ಬಗ್ಗೆ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಈವರೆಗೆ ವೀಕ್ಷಣೆ ಮಾಡಿರುವ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ಬೆಳೆ ವಿಮೆ ರೈತರಿಗೆ ನೆರವಾಗಲಿದೆ. ರಾಗಿ ಬೆಳೆ ವಿಮೆ ಮಾಡಿಸಲು ಆ.೧೪ರ ವರೆಗೆ ಕಾಲಾವಕಾಶವಿದೆ. ಹಾಗಾಗಿ ರೈತರು ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಲು ಮುಂದಾಗಬೇಕು ಎಂದು ಸಚಿವರು ರೈತರಲ್ಲಿ ಮನವಿ ಮಾಡಿದರು.

ರೈತರಿಗೆ ಆತ್ಮಸ್ಥೈರ್ಯ ತುಂಬಿದ ಸಚಿವರು: ಪೂರ್ವ ಮುಂಗಾರು ಮತ್ತು ಮುಂಗಾರಿನಲ್ಲಿ ನಿರೀಕ್ಷೆಯಂತೆ ಮಳೆಯಾಗದ ಕಾರಣ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಈ ವೇಳೆಗೆ ಶೇ.೫೦ ರಷ್ಟು ಬಿತ್ತನೆಯಾಗಬೇಕಿತ್ತು. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು ರೈತರು ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಬಿತ್ತನೆ ಕಾರ್ಯ ಆರಂಭಿಸಬೇಕು. ಬರಗಾಲ ಬಂದಿದೆ ಎಂದು ಯಾವುದೇ ರೈತರು ಆತಂಕಕ್ಕೀಡಾಗುವುದು ಬೇಡ. ರೈತರ ನೆರವಿಗೆ ಸರ್ಕಾರ ನಿಲ್ಲುತ್ತದೆ. ಒಂದು ವೇಳೆ ಮಳೆಯಾಗದಿದ್ದರೆ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ರೈತರಿಗೆ ಆತ್ಮಸ್ಥೈರ್ಯ ತುಂಬಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಸಿಇಒ ಕೆ.ಆರ್.ನಂದಿನಿ, ತಹಸೀಲ್ದಾರ್ ಅಶೋಕ್, ತಾ.ಪಂ.ಇಒ ಬಿ.ಎಸ್.ಸತೀಶ್, ಪಾಂಡವಪುರ ಉಪ ಕೃಷಿನಿರ್ದೇಶಕಿ ಸುಷ್ಮಾ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ಬಿಇಒ ಎಸ್.ಆರ್.ಲೋಕೇಶ್, ಕೃಷಿ ತಾಂತ್ರಿಕ ಅಧಿಕಾರಿ ಯುವರಾಜ್, ರಾಜಸ್ವ ನಿರೀಕ್ಷಕ ಮಧುಸೂಧನ್ ಸೇರಿದಂತೆ ಹಲವರು ಇದ್ದರು.