ಸಾರಾಂಶ
ಕಾರವಾರ:
ಶಿರಸಿ ತಾಲೂಕಿನ ಬನವಾಸಿಯ ಗುಡ್ನಾಪುರದಲ್ಲಿನ ಐತಿಹಾಸಿಕ ರಾಣಿ ಮನೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ಆಕರ್ಷಣೀಯ ಸ್ಥಳವಾಗಿ ಮಾಡುವಂತೆ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.ಬನವಾಸಿಗೆ ಬುಧವಾರ ಭೇಟಿ ನೀಡಿ, ಗುಡ್ನಾಪುರದಲ್ಲಿನ ರಾಣಿ ಮನೆಯ ಸ್ಥಳ ವೀಕ್ಷಿಸಿ ಮಾತನಾಡಿದರು. ಕದಂಬ ವಂಶದ ಮಹಾರಾಜರು ವಸಂತ ಕಾಲದಲ್ಲಿ ತಮ್ಮ ಕುಟುಂಬ ಸಮಿತ್ರಾಹಿ ಇಲ್ಲಿಗೆ ಆಗಮಿಸಿ ತಂಗುತ್ತಿದ್ದ ಈ ಸ್ಥಳವು ಐತಿಹಾಸಿಕ ಹಿನ್ನಲೆ ಹೊಂದಿದೆ. ಪ್ರಸ್ತುತ ಇಲ್ಲಿರುವ ಅವಶೇಷಗಳು ರಾಣಿಮನೆಯ ವೈಭವಕ್ಕೆ ಸಾಕ್ಷಿಯಾಗಿವೆ. ಈ ಸ್ಥಳದ ಇತಿಹಾಸವನ್ನು ಸಾರ್ವಜನಿಕರಿಗೆ ತಿಳಿಸುವುದು ಅತ್ಯಂತ ಅಗತ್ಯವಿದೆ ಎಂದರು.ಪ್ರಸ್ತುತ ಇಲ್ಲಿರುವ ರಾಣಿ ಮನೆಯ ಅವಶೇಷಗಳಿಗೆ ಯಾವುದೇ ಹಾನಿಯಾಗದಂತೆ ಅತ್ಯಂತ ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಈ ಸ್ಥಳದಲ್ಲಿನ ಪುರಾತನ ಆವರಣ ಗೋಡೆಗಳ ದುರಸ್ತಿ, ಆವರಣದಲ್ಲಿನ ಗಿಡಗಂಟೆ ತೆಗೆದು ಸ್ವಚ್ಛಗೊಳಿಸುವಂತೆ ನಿರ್ದೇಶನ ನೀಡಿದ ಡಿಸಿ, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು. ಈ ಸ್ಥಳದ ಐತಿಹಾಸಿಕ ಹಿನ್ನೆಲೆ ಕುರಿತಂತೆ ಪ್ರವೇಶದ್ವಾರದಲ್ಲಿ ವಿವರವಾದ ಮಾಹಿತಿ ಫಲಕ ಅಳವಡಿಸಿ, ಶಿಲಾ ಶಾಸನಗಳನ್ನು ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡುವಂತೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಈ ಬಾರಿಯ ಕದಂಬೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವಂತೆ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಾಧಿಕಾರಿ ಅಪರ್ಣಾ ರಮೇಶ್, ತಹಸೀಲ್ದಾರ್ ಶ್ರೀಧರ, ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ಇದ್ದರು.