ಧಾರವಾಡ ಸುತ್ತಮುತ್ತಲು ಉತ್ತಮ ಗುಣಮಟ್ಟದ ಆಪೂಸು ಮಾವು ಬೆಳೆಯಲಾಗುತ್ತಿದೆ. ಇದು ದೇಶ-ವಿದೇಶಗಳಿಗೆ ರಫ್ತಾಗಬೇಕೆಂಬ ಉದ್ದೇಶದಿಂದ ಇಂಟಿಗ್ರೇಟೆಡ್ ಪ್ಯಾಕ್‌ಹೌಸನ್ನು ಕುಂಬಾಪುರದಲ್ಲಿ ನಿರ್ಮಿಸಲಾಗುತ್ತಿದೆ.

ಧಾರವಾಡ:

ಮಾವು ಮೌಲ್ಯವರ್ಧನೆಗಾಗಿ ಧಾರವಾಡದಲ್ಲಿ ನಿರ್ಮಿಸಲಾಗುತ್ತಿರುವ ಇಂಡಿಗ್ರೇಟೆಡ್ ಪ್ಯಾಕ್‌ಹೌಸ್ ಬೇಸಿಗೆಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರಾಟ ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಸುತ್ತಮುತ್ತಲು ಉತ್ತಮ ಗುಣಮಟ್ಟದ ಆಪೂಸು ಮಾವು ಬೆಳೆಯಲಾಗುತ್ತಿದೆ. ಇದು ದೇಶ-ವಿದೇಶಗಳಿಗೆ ರಫ್ತಾಗಬೇಕೆಂಬ ಉದ್ದೇಶದಿಂದ ಇಂಟಿಗ್ರೇಟೆಡ್ ಪ್ಯಾಕ್‌ಹೌಸನ್ನು ಕುಂಬಾಪುರದಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಭರದಿಂದ ಸಾಗಿದ್ದು, ಸುಮಾರು ಮೂರು ತಿಂಗಳ ಕಾಮಗಾರಿ ಬಾಕಿ ಇದೆ. ಇದನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ಮಾವು ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಇಂಟಿಗ್ರೇಟೆಡ್ ಪ್ಯಾಕ್‌ಹೌಸ್‌ನಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇರಲಿವೆ. ಮಾವಿನ ಕಾಯಿ ಗಿಡದಿಂದ ಬಂದ ತಕ್ಷಣ ವಾಷಿಂಗ್, ಹಾಟ್‌ವಾಟರ್ ಟ್ರೀಟ್‌ಮೆಂಟ್ ಘಟಕಗಳು, ಗ್ರೇಡಿಂಗ್ ಘಟಕ, ಲೈಟಿಂಗ್ ಚೇಂಬರ್, ಕೋಲ್ಡ್ ಸ್ಟೋರೇಜ್, ಪ್ಯಾಕೇಜ್ ಸೇರಿದಂತೆ ವಿವಿಧ ಘಟಕಗಳು ಇರಲಿವೆ. ಒಂದೇ ಸೂರಿನಲ್ಲಿ ಎಲ್ಲ ಸೌಲಭ್ಯಗಳು ದೊರೆಯಲಿವೆ. ಇದರಿಂದ ಬೇಡಿಕೆಗಳಿಗೆ ಅನುಗುಣವಾಗಿ ಗುಣಮಟ್ಟದ ಮಾವು ರಫ್ತು ಮಾಡಲು ಪ್ಯಾಕ್‌ಹೌಸ್ ಪೂರಕವಾಗಲಿದೆ. ಉತ್ತರ ಕರ್ನಾಟಕ ಭಾಗದ ಮಾವು ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಪ್ಯಾಕ್‌ಹೌಸ್ ನಿರ್ಮಾಣಕ್ಕೆ ಅನುದಾನದ ಕೊರತೆಯಿಲ್ಲ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಧಾರವಾಡದ ಆಪೂಸನ್ನು ಬ್ರ್ಯಾಂಡ್‌ ಮಾಡುವುದು ನಮ್ಮ ಉದ್ದೇಶ. ಗುಣಮಟ್ಟ, ರುಚಿಯಲ್ಲಿ ತನ್ನದೇ ವಿಶೇಷತೆ ಹೊಂದಿರುವ ಆಪೂಸು ತಳಿಯನ್ನು ವಿಶ್ವಾದ್ಯಂತ ತಲುಪಿಸಲು ನಿಗಮ ಪ್ರಯತ್ನಿಸಲಿದೆ ಎಂದು ಹೇಳಿದರು.

ಧಾರವಾಡ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಉತ್ತಮ ದರ್ಜೆಯ ಮಾವು ಬೆಳೆಯುತ್ತಿದ್ದು, ಇಳುವರಿ ಹೆಚ್ಚಿಸುವ ದಿಸೆಯಲ್ಲಿ ಬೆಳೆಗಾರರಿಗೆ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ತಜ್ಞರನ್ನು ಕರೆಸಿ ತರಬೇತಿ ಕೊಡಿಸಲಾಗುತ್ತದೆ ಎಂದರು.

ರಾಮನಗರದಲ್ಲಿ ಫಾರ್ವರ್ಡ್ ಲಿಂಕೇಜ್ ಸೆಂಟರ್ ಮಾಡಲಾಗಿದೆ. ಇದರಿಂದ ಸುತ್ತಮುತ್ತಲಿನ ಭಾಗದ ಮಾವು ಬೆಳೆಗಾರರಿಗೆ ಅನುಕೂಲವಾಗಲಿದೆ. ಮಾವು ಬೆಳೆಗಾರರ ಬಹುದಿನಗಳ ನಿರೀಕ್ಷೆಯಂತೆ ಮಾವು ಮಂಡಳಿ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.ಈ ವೇಳೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಸಂತೋಷ ಸಪ್ಪಂಡಿ, ಧಾರವಾಡ ಮಾವು ಬೆಳೆಗಾರರ ಬಳಗದ ಡಾ. ರಾಜೇಂದ್ರ ಪೋದ್ದಾರ, ಸುಭಾಸ ಆಕಳವಾಡಿ, ಪ್ರಮೋದ ಗಾಂವಕರ ಇದ್ದರು.