ಸಾರಾಂಶ
ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ಭಾರತೀಯರಾಗಿ ಭಿನ್ನಾಭಿಪ್ರಾಯ ಮತ್ತು ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು, ಸಹಬಾಳ್ವೆ, ವೈವಿಧ್ಯತೆಯಲ್ಲಿ ಏಕತೆಯ ಒಗ್ಗಟ್ಟನ್ನು ಮೈಗೂಡಿಸಿಕೊಂಡು ದೇಶದ ಸಮಗ್ರತೆ ಅಖಂಡತೆ ಕಾಪಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಭಿವೃದ್ಧಿಶೀಲ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಲಿ ಕಟ್ಟಲು ನಮ್ಮಲ್ಲಿ ಒಗ್ಗಟ್ಟು ಬಲವಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಮತ್ತು ಸಾಂಸ್ಕೃತಿಕತೆಯಲ್ಲಿ ವೈವಿಧ್ಯತೆ ಹೊಂದಿದ್ದ ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು. ಒಗ್ಗಟ್ಟು ಇಲ್ಲದಿರುವುದನ್ನ ಅರಿತು ಬ್ರಿಟಿಷರು ವ್ಯಾಪಾರಕ್ಕೆಂದು ಬಂದು ಭಾರತದ ಮೇಲೆ ಹಿಡಿತ ಸಾಧಿಸಿ, 200 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಮಹಾತ್ಮ ಗಾಂಧೀಜಿ ಸೇರಿದಂತೆ ನೂರಾರು ಮಹನೀಯರು ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ನಡೆಸಿ ಮಡಿದರು. ಸ್ವಾತಂತ್ರ ನಂತರ 77 ವರ್ಷಗಳ ಕಾಲ ಪ್ರಜಾತಂತ್ರ ವ್ಯವಸ್ಥೆಯಡಿ ಭಾರತವನ್ನು ಅಭಿವೃದ್ಧಿಯತ್ತ ಕೊಂಡೋಯ್ಯಲಾಗಿದೆ. ದೇಶದ ಸಮಗ್ರತೆ ಅಖಂಡತೆಯನ್ನು ಕಾಪಾಡಲು ಎಲ್ಲರೂ ಒಂದಾಗಬೇಕೆಂದು ಅವರು ತಿಳಿಸಿದರು.ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ನಿವೃತ್ತ ಸೈನಿಕ ರಾಚಪ್ಪ, ಅನಾಥ ಶವಗಳ ಮೋಕ್ಷಧಾತ ಎಂ. ಮಾದೇಶ, ನಿವೃತ್ತ ದೈಹಿಕ ಶಿಕ್ಷಕ ಆರ್.ಎಸ್.ಬಸವರಾಜು, ಸಮಾಜ ಸೇವಕ ಬಿ. ಪ್ರದೀಪ್, ಜವರಾಜು, ಎಂ.ಎನ್. ಕುಮಾರ್, ಬಿ. ಮನ್ಸೂರ್ ಆಲಿ ಹಾಗೂ ಜಾನಪದ ಕಲಾವಿದ ಕಲಿಯೂರು ರಾಜೀವ್ ಅವರನ್ನು ಸನ್ಮಾನಿಸಲಾಯಿತು.
ಸೋಸಲೆ ಸರ್ಕಾರಿ ಆದರ್ಶ ವಿದ್ಯಾಲಯದ ಕನ್ನಡ ಅಧ್ಯಾಪಕ ಸಿ. ಸೋಮಣ್ಣ ಮಾತನಾಡಿದರು.ಪುರಸಭೆ ಸದಸ್ಯರಾದ ಎನ್. ಸೋಮಣ್ಣ, ಮಂಜು, ತಾಪಂ ಮಾಜಿ ಸದಸ್ಯರಾದ ಎಂ. ರಮೇಶ, ಬಿ. ಮರಯ್ಯ, ರಾಮಲಿಂಗಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಸಿ. ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ಪೊಲೀಸ್ ಇನ್ ಸ್ಪೆಕ್ಟರ್‌ಧನಂಜಯ, ಕುರುಬರ ಸಂಘದ ಅಧ್ಯಕ್ಷ ಮಹೇಶ್, ಮುಖ್ಯ ಅಧಿಕಾರಿ ಬಿ.ಕೆ. ವಸಂತಕುಮಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ ಇದ್ದರು.