ದೈಹಿಕ ಶಿಕ್ಷಣದಿಂದ ಬೌದ್ಧಿಕ, ಮಾನಸಿಕ ಬೆಳವಣಿಗೆ ಸಾಧ್ಯ

| Published : Mar 05 2025, 12:31 AM IST

ಸಾರಾಂಶ

ಮಕ್ಕಳ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅವರ ಪಾಠ ದೈಹಿಕ ವಿಕಸನಕ್ಕೆ ಒತ್ತು ನೀಡುತ್ತದೆ. ದೈಹಿಕ ಶಿಕ್ಷಣದಿಂದ ಮಕ್ಕಳ ಬೌದ್ಧಿಕ, ಮಾನಸಿಕ, ದೈಹಿಕ ಬೆಳವಣಿಗೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಮಕ್ಕಳ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಅವರ ಪಾಠ ದೈಹಿಕ ವಿಕಸನಕ್ಕೆ ಒತ್ತು ನೀಡುತ್ತದೆ. ದೈಹಿಕ ಶಿಕ್ಷಣದಿಂದ ಮಕ್ಕಳ ಬೌದ್ಧಿಕ, ಮಾನಸಿಕ, ದೈಹಿಕ ಬೆಳವಣಿಗೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ ಹೇಳಿದರು.ತಾಲೂಕಿನ ಮುನಿಯಪ್ಪನದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಲೂಕು ದೈಹಿಕ ಶಿಕ್ಷಕರ ಸಂಘ ಗ್ರೇಡ್ - 1, ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಆಯೋಜಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿಯು ಶಿಸ್ತು, ಸಂಯಮವನ್ನು ಕಲಿಸುವ ವೃತ್ತಿಯಾಗಿದೆ. ಇತರೆ ಪಠ್ಯ ವಿಷಯಗಳಷ್ಟೇ ದೈಹಿಕ ಶಿಕ್ಷಣಕ್ಕೂ ಮಹತ್ವವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ಇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ದೈಹಿಕ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡುವುದರ ಜೊತೆಗೆ ಅಗತ್ಯ ದಾಖಲೆಪತ್ರಗಳನ್ನು ನಿರ್ವಹಿಸಿ ಶಾಲೆಯನ್ನು ಸುಂದರವಾಗಿಸಿ. ಮಕ್ಕಳ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಸೂಚಿಸಿದರು.ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ್ ಗೌಡ ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸ್ವಚ್ಛತೆ, ಪರಿಸರ ಸಂರಕ್ಷಣೆಯ ಪಾಠ ಕಲಿಸುವ ದೈಹಿಕ ಮತ್ತು ವೃತ್ತಿ ಶಿಕ್ಷಕರು ಜೀವನ ಮೌಲ್ಯಗಳನ್ನು ಕಲಿಸಬೇಕು ಎಂದು ಎಂದು ಕಿವಿಮಾತು ಹೇಳಿದರು.ಗ್ರೇಡ್ - 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಮಾತನಾಡಿ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ದೈಹಿಕ ಶಿಕ್ಷಣ ಮತ್ತು ವೃತ್ತಿ ಶಿಕ್ಷಕರ ಪಾತ್ರ ಮಹತ್ವದ್ದು, ಆದರೆ ದೈಹಿಕ ಶಿಕ್ಷಕರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ, ದೈಹಿಕ ಶಿಕ್ಷಕರು ಪ್ರಾಥಮಿಕ ಹಂತದಿಂದ ಮಕ್ಕಳಿಗೆ ಯೋಗ, ವ್ಯಾಯಾಮ, ಪ್ರಾಣಾಯಾಮ ಅಭ್ಯಾಸ ಮಾಡಿಸಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ವೈದ್ಯರಂತೆ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ ಶಾಲೆಗೊಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಇರಲೇಬೆಕು ಎಂದರು.ದೈಹಿಕ ಶಿಕ್ಷಣ ವಿಭಾಗದ ರಾಜ್ಯ ಸಂಪನ್ಮೂಲ ವ್ಯಕ್ತಿ ಸದಾಶಿವ ಪಲ್ಲೆದ್ ಮಾತನಾಡಿ, ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ನಾಯಕತ್ವದ ಗುಣಗಳನ್ನು ರೂಢಿಸುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಕ್ರೀಡೆ, ಯೋಗ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ತಿಳುವಳಿಕೆ ನೀಡಬೇಕು. ಆ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಭಾರತಿ ಬಬಲೇಶ್ವರ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ವೈ.ಕೆ. ಸುಧಾ ಮಾತನಾಡಿದರು. ಪ್ರಭಾರಿ ಕ್ಷೇತ್ರಸಮನ್ವಯಾಧಿಕಾರಿ ರಾಜಶೇಖರ್, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮರಾಜು, ಪ್ರಧಾನ ಮಂತ್ರಿ ಪೋಷಣಾ ಅಭಿಯಾನದ ಸಹಾಯಕ ನಿರ್ದೇಶಕ ಸಿದ್ದರಾಜು, , ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರಂಗನಾಥ್ , ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಣ್ಣ, ಸಂಗಯ್ಯ ಹಿರೇಮಠ್ , ಆನಂದ್ , ಹರೀಶ್, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.