ಕೃತಕ ಬುದ್ಧಿಮತ್ತೆಯಿಂದ ವಿಚಾರ ಶೀಲತೆ ನಾಶ

| Published : Feb 05 2025, 12:31 AM IST

ಸಾರಾಂಶ

ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಬಿ.ಡಿ.ಕುಂಬಾರ್‌ ಹೇಳಿಕೆ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಕೃತಕ ಬುದ್ಧಿಮತ್ತೆ ಬಹಳ ವೇಗವಾಗಿ ಬೆಳೆಯುತ್ತಿದ್ದು ಅದು ನಮ್ಮ ಮಕ್ಕಳಲ್ಲಿನ ವಿಚಾರಶೀಲನೆಯನ್ನು ನಾಶ ಮಾಡುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಬಿ.ಡಿ.ಕುಂಬಾರ್‌ ಹೇಳಿದರು.

ಭರಮಸಾಗರದಲ್ಲಿ ಮಂಗಳವಾರ ಸಂಜೆ ಆರಂಭಗೊಂಡ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಬೆಳೆಯುತ್ತಿರುವ ತಾಂತ್ರಿಕತೆಗೆ ನಾವು ಶರಣಾಗಿರುವುದರಿಂದ ಕೃತಕ ಬುದ್ಧಿಮತ್ತೆ ನಮ್ಮ ಮೇಲೆ ಪ್ರಭಾವ ಬೀರುತ್ತಿದೆ ಎಂದರು.

ದೇಶದ ಶಿಕ್ಷಣ ಪದ್ಧತಿಯಲ್ಲಿ ಹಲವು ಗೊಂದಲಗಳು ಮುಂದುವರೆದಿವೆ. ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ ಪಠ್ಯಕ್ರಮ ಹಾಗೂ ಐಸಿಎಸ್‌ಸಿ ಶಿಕ್ಷಣ ಪದ್ಧತಿಗಳು ಹಲವು ಗೊಂದಲಗಳನ್ನು ಸೃಷ್ಠಿಸಿವೆ. ಮಕ್ಕಳ ಅಭಿರುಚಿಯನ್ನು ಅರಿತು ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಮಕ್ಕಳಲ್ಲಿ ಅಕ್ಷರಕ್ಕೆ ನೀಡುವಷ್ಟೇ ಅವಕಾಶ ಕಲೆಗೂ ಸಿಗುವಂತೆ ಮಾಡಬೇಕು ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ 76ಸಾವಿರದ ಶಾಲಾ ಕಾಲೇಜುಗಳಲ್ಲಿ 1.8 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಿದ್ದರೂ ಇನ್ನೂ ಕೆಲವರಿಗೆ ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಮೂಡಿಲ್ಲ. ಜನರಲ್ಲಿ ಸರ್ಕಾರಿ ಶಾಲೆಗಳ ವಿಶ್ವಾಸ ಮೂಡಿಸಲು ಹಲವು ಕಾರ್ಯಗಳನ್ನು ಮುಂದುವರೆಸಿದ್ದೇವೆ. ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ರಾಜ್ಯದ ಶಾಲೆಗಳಲ್ಲಿ ಪೌಷ್ಠಿಕ ಆಹಾರ ನೀಡಲು ಅಜಿಂಪ್ರೇಂಜಿ ಪೌಂಡೇಷನ್‌ 1,591 ಕೋಟಿ ರು. ಹಣದ ನೆರವು ನೀಡಿದೆ. ರಾಜ್ಯದಲ್ಲಿ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಎಡಿಬಿ ಬ್ಯಾಂಕ್‌ 2,000 ಕೋಟಿ ನೆರವಿನ ಹಸ್ತ ಚಾಚಿದೆ ಎಂದರು.

ತರಳಬಾಳು ಮಠವು ಲಕ್ಷಾಂತರ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ. ಲಕ್ಷಾಂತರ ಮಕ್ಕಳು ಸಂಸ್ಥೆಯಿಂದ ಶೈಕ್ಷಣಿಕ ನೆರವು ಪಡೆದಿದ್ದಾರೆ ಎಂದರು.ವಿಧಾನ ಪರಿಷತ್‌ ಸದಸ್ಯ ಎನ್.‌ರವಿಕುಮಾರ್‌ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಯನ್ನು ಕಲಿಸುವ ಪದ್ಧತಿ ಸಮಾಜದಲ್ಲಿ ಬೆಳೆಯಬೇಕು. ನಮ್ಮ ಮನೆಗಳು ಮತ್ತು ಶಾಲೆಗಳಲ್ಲಿ ಸಂಸ್ಕೃತಿಯನ್ನು ಕಲಿಸುವ ಯತ್ನವನ್ನು ಮಾಡಬೇಕಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಚಾರಿತ್ರ್ಯವೇ ಶಿಕ್ಷಣ ಗುರಿ ಎಂದು ಹೇಳಿದ್ದಾರೆ. ನಮ್ಮ ಶಿಕ್ಷಣ ಪದ್ಧತಿ ಕೇವಲ ಸಾಕ್ಷರರನ್ನು ಸೃಷ್ಠಿ ಮಾಡದೆ ಸಂಸ್ಕೃತಿವಂತರನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ, ಗದಗ ವಿಜಯಪುರದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಎಚ್.‌ಆಂಜನೇಯ, ಅಣ್ಣಾಪುರ ಶಿವಕುಮಾರ್‌, ಕವಿತಾ ವೆಂಕಟರಾಜು ಉಡುಪ, ಚಿತ್ರನಟ ಡಾಲಿ ಧನಂಜಯ, ಶಾಸಕರಾದ ಎಂ.ಚಂದ್ರಪ್ಪ, ಕೆ.ಬಸವಂತಪ್ಪ, ಶಿವಗಂಗಾ ಬಸವರಾಜ್‌, ಹಿರೇಮಗಳೂರು ಕಣ್ಣನ್‌, ನಾಗಶ್ರೀ ತ್ಯಾಗರಾಜ್‌ ಭಾಗವಹಿಸಿದ್ದರು.

ತರಳಬಾಳು ಹುಣ್ಣಿಮೆ ಸಮಿತಿಯ ಎಚ್.‌ಎನ್‌. ತಿಪ್ಪೇಸ್ವಾಮಿ ಸ್ವಾಗತಿಸಿದರು. ಹಲವು ಸಾಂಸ್ಕೃತಿಕ ಚಟುವಟಿಕೆಗಳು ಪ್ರದರ್ಶನಗೊಂಡವು.