ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಜಮ್ಮು ಕಾಶ್ಮೀರದ ಪಹಲ್ಗಾಮ್‌ಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾಧಕರು ನಡೆಸಿದ ಗುಂಡಿನ ದಾಳಿಯನ್ನು ಖಂಡಿಸಿ ನ್ಯಾಷನಲ್ ಕಾಲೇಜಿನ ಮುಂಭಾಗದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದ ಎಸ್ಎಫ್ಐ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಂತರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಉಗ್ರಗಾಮಿಗಳ ಹೇಯ ಕೃತ್ಯಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ಪಹಲ್ಗಾಮ್ ನಲ್ಲಿ ನಡೆದ ಉಗ್ರ ಕೃತ್ಯವು, ಅತ್ಯಂತ ಹೇಯ ಕೃತ್ಯವಾಗಿದೆ. ಅವರು ಯಾವ ಉದ್ದೇಶದಿಂದ 28 ಮಂದಿ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದಿದೆ ಅಂತಹ ಕೃತ್ಯ ಜರುಗಲು ಅಲ್ಲಿನ ಗುಪ್ತಚರ ಇಲಾಖೆ, ಸೇನೆ ಸೇರಿದಂತೆ ರಕ್ಷಣಾ ಪಡೆಗಳು ಏನು ಮಾಡುತ್ತಿದ್ದವು ಎಂದು ಪ್ರಶ್ನಿಸಿದರಲ್ಲದೆ ಇವರ ನಿರ್ಲಕ್ಷ್ಯದಿಂದ ನಡೆದಿರುವ ಈ ದುಷ್ಕೃತ್ಯ ಎಂದು ತೀವ್ರವಾಗಿ ಖಂಡಿಸಿದರು.
ಕೆಪಿಆರ್ ಎಸ್ ಸಂಘಟನೆಯ ತಾಲೂಕು ಸಂಚಾಲಕ ಮುನಿಸ್ವಾಮಿ ಮಾತನಾಡಿ,ಈ ದುಷ್ಕೃತ್ಯಕ್ಕೆ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಆರೋಪಿಸಿದ ಅವರು ಉಗ್ರಗಾಮಿಗಳ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಬೇಕಿತ್ತು. ಆದರೆ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುತ್ತವೆ ಎಂದರು.ಶಾ ರಾಜೀನಾಮೆ ಒತ್ತಾಯ
ಅಲ್ಲಿನ ರಾಜ್ಯಕ್ಕಿರುವ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರವು, ಅದರ ರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರಿದ್ದು ಏಕೆ ಎಂದು ಪ್ರಶ್ನಿಸಿದರಲ್ಲದೆ 28 ಮಂದಿಯ ಸಾವಿಗೆ ನೇರ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕಿದೆ ಹಾಗೂ ಗೃಹ ಮಂತ್ರಿಯವರು ಇದರ ನೈತಿಕ ಹೊಣೆ ಹೊತ್ತು ಕೂಡಲೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.ಸಿಪಿಐಎಂ ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ಜಿಲ್ಲಾ ಸಂಚಾಲಕ ಚೆನ್ನರಾಯಪ್ಪ, ಮುಖಂಡರಾದ ಕೃಷ್ಣಪ್ಪ, ರಫೀಕ್, ಅಶ್ವಥಪ್ಪ, ಮಧಕರಿ ಸುರೇಶ್, ರಾಮಾಂಜಿ ವಿದ್ಯಾರ್ಥಿಗಳಾದ ನಂದಿನಿ, ಶ್ರಾವಣಿ, ಮದ, ಸೂರಿ, ಪ್ರವೀಣ್ ಮತ್ತಿತರರು ಇದ್ದರು.