ಸಾರಾಂಶ
ನಿಷ್ಠಾವಂತನಿಗೆ ಮಣೆ ಹಾಕುವರೆ ಕಾಂಗ್ರೆಸ್ ವರಿಷ್ಠರು - ದೌಲತ್ ಷರೀಫ್ ಪ್ರಬಲ ಆಕಾಂಕ್ಷಿ - ಮೂವರಿಗೂ ತಲಾ 10 ತಿಂಗಳು ಅಧಿಕಾರ ಹಂಚಿಕೆ ಸಾಧ್ಯತೆ
ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರ
ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಸದಸ್ಯರ ಪಾಳೆಯದ ತೆರೆಮರೆಯಲ್ಲಿ ಭಾರಿ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದು, ಡಿಕೆ ಸಹೋದರರು ಹಾಗೂ ಶಾಸಕ ಇಕ್ಬಾಲ್ ಹುಸೇನ್ ಚಿತ್ತ ಯಾರತ್ತ ಎನ್ನುವುದು ಭಾರಿ ಕುತೂಹಲವನ್ನುಂಟು ಮಾಡಿದೆ.ನಗರಸಭೆ 31 ಸದಸ್ಯ ಬಲ ಹೊಂದಿದ್ದು, ಇದರಲ್ಲಿ ಓರ್ವ ಪಕ್ಷೇತರ ಸೇರಿ ಕಾಂಗ್ರೆಸ್ -20, ಜೆಡಿಎಸ್ - 11 ಸದಸ್ಯರ ಬಲ ಹೊಂದಿದೆ. ನಿಚ್ಚಳ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಮೂವರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿವೊಡ್ದಿದ್ದು, ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಗೊಂದಲ ಮೂಡಿದೆ.
ಈಗಿನ ಬೆಳವಣಿಗೆಯಲ್ಲಿ 19ನೇ ವಾರ್ಡಿನ ಇಕ್ಬಾಲ್ ಷರೀಫ್ (ದೌಲತ್ ಷರೀಫ್), 25ನೇ ವಾರ್ಡಿನ ಮುತ್ತುರಾಜು ಹಾಗೂ 14ನೇ ವಾರ್ಡಿನ ನಿಜಾಮುದ್ದೀನ್ ಷರೀಫ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರ ನಡುವೆ ಮಾಜಿ ಅಧ್ಯಕ್ಷರಾಗಿರುವ 5ನೇ ವಾರ್ಡಿನ ಕೆ.ಶೇಷಾದ್ರಿ(ಶಶಿ) ಹೆಸರು ಕೂಡ ಕೇಳಿ ಬರುತ್ತಿದೆ. ಈಗಾಗಲೇ ಆಕಾಂಕ್ಷಿತರು ಸದಸ್ಯರ ಬೆಂಬಲ, ಅಭಿಪ್ರಾಯ ಸಂಗ್ರಹಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಡಿಕೆ ಸಹೋದರರು , ಶಾಸಕ ಇಕ್ಬಾಲ್ ಹುಸೇನ್ ಜೊತೆಗೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿರವರ ಪ್ರಭಾವ ಸಾಕಷ್ಟು ಕೆಲಸ ಮಾಡಿದೆ. ಹೀಗಾಗಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ವರಿಷ್ಠರಲ್ಲಿ ಶೇಷಾದ್ರಿರವರ ಅಭಿಪ್ರಾಯಕ್ಕೂ ಮನ್ನಣೆ ಸಿಗಲಿದೆ.
ವಚನಭ್ರಷ್ಟರಾಗುವ ಆತಂಕ:ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಹಾಗೂ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ (ಎಂಇಐಎಲ್) ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ. ಆಡಳಿತ ಮತ್ತು ರಾಜಕೀಯ ಅನುಭವ ಹೊಂದಿರುವ ಕಾರಣಕ್ಕೆ ಕೆ.ಶೇಷಾದ್ರಿ ಅವರಿಗೆ ಅಧ್ಯಕ್ಷರಾಗಿ ನಗರದ ಮತದಾರರಿಗೆ ನೀಡಿದ್ದ ಭವರಸೆಗಳನ್ನು ಈಡೇರಿಸುವಂತೆ ಕೆಲ ಸದಸ್ಯರು ಹಾಗೂ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಆದರೆ, ಈಗಿರುವ ಮೂವರು ಆಕಾಂಕ್ಷಿಗಳು ಕೂಡ ಅವರೊಂದಿಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದಾರೆ. ಅಲ್ಲದೆ, ಮೊದಲ ಅವಧಿಯ ಅಧಿಕಾರ ಹಂಚಿಕೆ ವೇಳೆ ಉಂಟಾದ ರಾಜಕೀಯ ಬೆಳವಣಿಗೆಗಳಲ್ಲಿ ಮೂವರು ಸದಸ್ಯರು ಶೇಷಾದ್ರಿಯವರ ಬೆನ್ನಿಗೆ ನಿಂತಿದ್ದರು. ಆ ಸಮಯದಲ್ಲಿ ಶೇಷಾದ್ರಿ ಎರಡನೇ ಅವಧಿಯಲ್ಲಿ ಅವಕಾಶ ಸಿಕ್ಕರೆ ನಿಮಗೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ವಚನ ನೀಡಿದ್ದರು. ಈಗ ತಾನೇ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ ವಚನಭ್ರಷ್ಟನಾಗುತ್ತೇನೆ ಎಂಬ ಕಾರಣಕ್ಕೆ ಕೆ.ಶೇಷಾದ್ರಿ ತಟಸ್ಥರಾಗಲು ಕಾರಣ ಎನ್ನಲಾಗಿದೆ.
ಶೇಷಾದ್ರಿರವರು ವಿಧಾನ ಪರಿಷತ್ ಸದಸ್ಯ ಸ್ಥಾನ ಹಾಗೂ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಅಂತಹದೊಂದು ಭರವಸೆಯನ್ನು ವರಿಷ್ಠರು ನೀಡಿದ್ದರು. ಆ ಭರವಸೆಯನ್ನಾದರು ವರಿಷ್ಠರು ಈಡೇರಿಸಲಿ ಎಂಬುದು ಬೆಂಬಲಿಗರ ಒತ್ತಾಯವಾಗಿದೆ.ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿತರಾಗಿರುವ ದೌಲತ್ ಷರೀಫ್, ಮುತ್ತುರಾಜು ಹಾಗೂ ನಿಜಾಮುದ್ದೀನ್ ಷರೀಫ್ ತಮ್ಮದೇ ಆದ ಮಾರ್ಗದಲ್ಲಿ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. 2ನೇ ಅವಧಿಗೆ 30 ತಿಂಗಳು ಅಧಿಕಾರ ಇರುವುದರಿಂದ ಮೂವರಿಗೂ ತಲಾ 10 ತಿಂಗಳಿನಂತೆ ಅಧಿಕಾರ ಹಂಚಿಕೆ ಸೂತ್ರ ಅನುಸರಿಸುವ ಸಾಧ್ಯತೆಗಳೇ ಹೆಚ್ಚಾಗಿದೆ. ಮೊದಲ ಅವಧಿಯಲ್ಲಿ ಯಾರಿಗೆ ಅವಕಾಶ ಕಲ್ಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಯಾರಾಗುತ್ತಾರೆ ಎನ್ನುವುದರ ಆಧಾರ ಮೇಲೆ ಉಪಾಧ್ಯಕ್ಷ ಸ್ಥಾನ ನಿರ್ಧಾರವಾಗುತ್ತದೆ.ಇಕ್ಬಾಲ್ ಷರೀಫ್ ಪ್ರಬಲ ಆಕಾಂಕ್ಷಿ
ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗುತ್ತಿದ್ದಂತೆ 19ನೇ ವಾರ್ಡಿನ ಸದಸ್ಯ ಇಕ್ಬಾಲ್ ಷರೀಫ್ (ದೌಲತ್ ಷರೀಫ್ ) ಗದ್ದುಗೆ ಹಿಡಿಯಲು ಪ್ರಬಲ ಹೋರಾಟವನ್ನೇ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಾಳಯದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ದೌಲತ್ ಷರೀಫ್, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ನಗರಸಭೆ ಉಪಾಧ್ಯಕ್ಷರಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಈ ಮೊದಲು ತಾವು ಪ್ರತಿನಿಧಿಸುತ್ತಿದ್ದು 10ನೇ ವಾರ್ಡಿನಲ್ಲಿ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನ ಸೇವೆಯಲ್ಲಿ ನಿರತರಾಗಿದ್ದಾರೆ.ಡಿಕೆ ಸಹೋದರರು, ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ದೌಲತ್ ಷರೀಫ್ ನಗರಸಭೆ ಅಧ್ಯಕ್ಷರಾಗುವ ಉಮೇದಿನಲ್ಲಿದ್ದಾರೆನ್ನಲಾಗಿದೆ.
ನಗರಸಭೆ ಮಾತ್ರವಲ್ಲದೆ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪರವಾಗಿ ನಿಷ್ಠಾವಂತನಾಗಿ ದುಡಿದಿದ್ದೇನೆ. ಪಕ್ಷದ ವರಿಷ್ಠರು ನಗರಸಭೆ ಅಧ್ಯಕ್ಷನಾಗುವ ಅವಕಾಶ ಕಲ್ಪಿಸಿದರೆ ನಗರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಿ ಜನಸ್ನೇಹಿ ಆಡಳಿತ ನೀಡುತ್ತೇನೆ. ವರಿಷ್ಠರ ಆಶೀರ್ವಾದ ನನ್ನ ಮೇಲಿರಲಿದೆ ಎಂಬ ವಿಶ್ವಾಸವಿದೆ.-
ದೌಲತ್ ಷರೀಫ್, ಅಧ್ಯಕ್ಷ ಹುದ್ದೆ ಆಕಾಂಕ್ಷಿ