ಇನ್ನು ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆಯಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬೆಮಲ್ ಕಾಂತರಾಜ್ ಈ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಲ್ಲದೇ ಪುನಃ ಅವರು ಜೆಡಿಎಸ್ಗೆ ಹೋಗುತ್ತಾರೆಂಬ ಮಾತಿದೆ. ಬೇರೆ ಮುಖಂಡರು ಪಕ್ಷದ ಸಂಘಟನೆಗೆ ಒತ್ತು ನೀಡುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ ಇಲ್ಲಿ ಅನಾಥ.
ಎಸ್.ನಾಗಭೂಷಣ
ಕನ್ನಡಪ್ರಭವಾರ್ತೆ, ತುರುವೇಕೆರೆಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಮಾಡಿದ ಬೆನ್ನಲ್ಲೇ ಸ್ಥಳೀಯ ರಾಜಕೀಯ ಗರಿಗೆದರಿದೆ. ತಾಲೂಕಿನಲ್ಲಿ 4 ಜಿಪಂ ಮತ್ತು 16 ತಾಪಂ ಕ್ಷೇತ್ರಗಳಿದ್ದು, ತಾಲೂಕಿನ ದಬ್ಬೇಘಟ್ಟ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿದೆ. ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಟಿಕೆಟ್ಗೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ.
ಅದರಲ್ಲೂ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಒಕ್ಕಲಿಗ ಸಮುದಾಯದವರೇ ಹೆಚ್ಚಾಗಿ ಇದ್ದಾರೆ. ಇದು ಜೆಡಿಎಸ್ ಭದ್ರಕೋಟೆ. ಹೀಗಾಗಿ ಟಿಕೆಟ್ಗೆ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಈ ನಡುವೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇದೆ. ಹೀಗಾಗಿ ಎನ್ಡಿಎಯಿಂದ ಸ್ಪರ್ಧೆ ಮಾಡಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬುದು ರಾಜಕೀಯ ಲೆಕ್ಕಾಚಾರ.ಎನ್ಡಿಎಯಿಂದ ಸ್ಪರ್ಧೆಗೆ ಇಳಿಯಲು ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಪುತ್ರ ರಾಜೀವ್ ಕೃಷ್ಣಪ್ಪ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಎಪಿಎಂಸಿ ಮಾಜಿ ನಿರ್ದೇಶಕ ಮಾವಿನಕೆರೆ ವಿಜಯೇಂದ್ರ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಡಗರಹಳ್ಳಿ ತ್ಯಾಗರಾಜು, ತಾಪಂ ಮಾಜಿ ಅಧ್ಯಕ್ಷ, ಎಪಿಎಂಸಿ ಹಾಲಿ ಅಧ್ಯಕ್ಷ, ಜಿಪಂ ಮಾಜಿ ಸದಸ್ಯೆ ಪತಿ ಎಂ.ಡಿ.ರಮೇಶ್ ಗೌಡ, ಕ್ಯಾಮಸಂದ್ರದ ಬೋರ್ ವೆಲ್ ಮಂಜಣ್ಣ, ಜಿಪಂ ಮಾಜಿ ಸದಸ್ಯ ಎ.ಬಿ.ಜಗದೀಶ್, ವಿಠಲದೇವರಹಳ್ಳಿಯ ಹರೀಶ್ ಜೆಡಿಎಸ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಈ ಮಧ್ಯೆ ಬಿಜೆಪಿಯಿಂದ ಮುದಿಗೆರೆ ಕೆಂಪೇಗೌಡ, ಮೇಲಿನವರಗೇನಹಳ್ಳಿಯ ಗಣೇಶ್ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ ನಿಂದ ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಪಿಎಲ್ಡಿ ಬ್ಯಾಂಕ್ ಹಾಲಿ ಅಧ್ಯಕ್ಷ ದಬ್ಬೇಘಟ್ಟ ಉಗ್ರೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೋಣಿ ತುಮಕೂರು ಲಕ್ಷ್ಮೀಕಾಂತ್ ಅವರ ಹೆಸರು ಕೇಳಿಬರುತ್ತಿದೆ.ದಬ್ಬೇಘಟ್ಟ ಜಿಪಂ ಕ್ಷೇತ್ರಕ್ಕೆ ದಬ್ಬೇಘಟ್ಟ, ಕಣತೂರು, ಗೋಣಿತುಮಕೂರು, ಮಾವಿನಕೆರೆ ತಾಪಂ ಕ್ಷೇತ್ರಗಳು ಸೇರುತ್ತವೆ. ಈ ನಡುವೆ ತಾಲೂಕಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆಯೇ ತೀವ್ರ ಹಣಾಹಣಿ ಇದೆ. ಎರಡೂ ಪಕ್ಷಗಳು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಒಡ್ಡಿದ್ದವು. ತಮ್ಮ ತಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ಎರಡೂ ಪಕ್ಷಗಳಿಗೆ ಅನಿವಾರ್ಯವಾಗಿದೆ. ಜೆಡಿಎಸ್ನಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಬಿಜೆಪಿಯಲ್ಲಿ ಮಾಜಿ ಶಾಸಕ ಮಸಾಲಾ ಜಯರಾಮ್ ರಿಗೆ ತಮ್ಮ ಪಕ್ಷದ ಕಾರ್ಯಕರ್ತರನ್ನು ತಮ್ಮಲ್ಲೇ ಹಿಡಿದಿಟ್ಟುಕೊಳ್ಳಬೇಕೆಂಬ ಹಂಬಲವಿದೆ. ಹೀಗಾಗಿ ಎರಡೂ ಪಕ್ಷಗಳಲ್ಲಿ ಮೈತ್ರಿ ಆಗದಿದ್ದರೆ ಸಾಕಪ್ಪಾ ಎಂದು ಹತ್ತು ಹಲವು ದೇವರಿಗೆ ಕೈ ಮುಗಿಯುತ್ತಿದ್ದಾರೆ.
ಇನ್ನು ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆಯಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬೆಮಲ್ ಕಾಂತರಾಜ್ ಈ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಲ್ಲದೇ ಪುನಃ ಅವರು ಜೆಡಿಎಸ್ಗೆ ಹೋಗುತ್ತಾರೆಂಬ ಮಾತಿದೆ. ಬೇರೆ ಮುಖಂಡರು ಪಕ್ಷದ ಸಂಘಟನೆಗೆ ಒತ್ತು ನೀಡುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ ಇಲ್ಲಿ ಅನಾಥ.ಗ್ಯಾರಂಟಿಯಿಂದಾಗಿ ನಮ್ಮ ಗೆಲುವು ನಿಶ್ಚಿತ ಎಂದು ಹಲವರು ಸ್ವಯಿಚ್ಛೆಯಿಂದ ಕಾಂಗ್ರೆಸ್ನಿಂದ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಅಕಸ್ಮಾತ್ ಜೆಡಿಎಸ್ ಅಥವಾ ಎನ್ಡಿಎಯಿಂದ ಟಿಕೆಟ್ ವಂಚಿತರಾದವರನ್ನು ಕ್ಯಾಚ್ ಹಾಕಿ ಕಾಂಗ್ರೆಸ್ ಟಿಕೆಟ್ ನೀಡಿದರೂ ಆಶ್ಚರ್ಯವಿಲ್ಲ. ಮೇಲ್ನೋಟಕ್ಕೆ ಜೆಡಿಎಸ್ನಲ್ಲಿ ರಾಜೀವ್ ಕೃಷ್ಣಪ್ಪ, ವಿಜಯೇಂದ್ರ ಮತ್ತು ತ್ಯಾಗರಾಜ್, ರಮೇಶ್ ಗೌಡ ಮತ್ತು ವಿಠಲದೇವರಹಳ್ಳಿ ಹರೀಶ್ ನಡುವೆ ಭಾರಿ ಪೈಪೋಟಿ ಇದೆ. ಆಂತಿಮವಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಯಾರಿಗೆ ಮುದ್ರೆ ಒತ್ತುವರೋ ಕಾದು ನೋಡಬೇಕು.