ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿ ತೀವ್ರಗೊಳಿಸಿ: ಡಾ.ಉಮೇಶ ಜಾಧವ

| Published : Feb 12 2024, 01:30 AM IST

ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿ ತೀವ್ರಗೊಳಿಸಿ: ಡಾ.ಉಮೇಶ ಜಾಧವ
Share this Article
  • FB
  • TW
  • Linkdin
  • Email

ಸಾರಾಂಶ

ಅಮೃತ ಮಾಲಾ ಯೋಜನೆಯಡಿ ಜಿಲ್ಲೆಯ ಕಲಬುರಗಿ, ವಾಡಿ, ಶಹಾಬಾದ, ಗಾಣಗಾಪುರ ರೈಲ್ವೆ ನಿಲ್ದಾಣ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ವೇಗ ಹೆಚ್ಚಿಸಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಮೃತ ಮಾಲಾ ಯೋಜನೆಯಡಿ ಜಿಲ್ಲೆಯ ಕಲಬುರಗಿ, ವಾಡಿ, ಶಹಾಬಾದ, ಗಾಣಗಾಪುರ ರೈಲ್ವೆ ನಿಲ್ದಾಣ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ವೇಗ ಹೆಚ್ಚಿಸಬೇಕು ಎಂದು ಸಂಸದ ಡಾ.ಉಮೇಶ ಜಾಧವ ಅವರು ಸೆಂಟ್ರಲ್ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಡೀಸಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ‌ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ "ದಿಶಾ " ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಐತಿಹಾಸಿಕ ನಿಲ್ದಾಣಗಳನ್ನು ನವೀಕರಿಸುವ ಮಹತ್ತರ ಯೋಜನೆ ಇವುಗಳಾಗಿದ್ದು, ಕೂಡಲೆ ಪೂರ್ಣಗೊಳಿಸಬೇಕು ಎಂದರು.

ಕಲಬುರಗಿ ರೈಲ್ವೆ ನಿಲ್ದಾಣದ ಸೋಲಾಪುರ ಕಡೆ ಹಳೇ ಜೇವರ್ಗಿ ರಸ್ತೆಯ ಆರ್.ಯು.ಬಿ. ಬಳಿ ಇರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಥಳವನ್ನು ವಶಕ್ಕೆ ಪಡೆದು ಅಲ್ಲಿ ರೇಲ್ವೆ ನಿಲ್ದಾಣಕ್ಕೆ ಮೂರನೇ‌ ಎಂಟ್ರಿ ಮಾಡಬೇಕಿದ್ದು, ರೈಲ್ವೆ ಅಧಿಕಾರಿಗಳು ಕಲಬುರಗಿ ಡಿ.ಸಿ. ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಈ ಕುರಿತು ಚರ್ಚಿಸಬೇಕು ಎಂದರು.

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ 5 ಮತ್ತು 6ನೇ ಪ್ಲಾಟ್‌ಫಾರ್ಮ್ ನಿರ್ಮಿಸಬೇಕೆಂಬ ಬೇಡಿಕೆ ಪರಿಶೀಲಿಸಿದ್ದು, ಅದು ಕಾರ್ಯಸಾಧುವಲ್ಲ ಎಂದು ವರದಿ ಬಂದಿದೆ. ನಿಲ್ದಾಣದಲ್ಲಿ ಸೋಲಾಪುರ ಕಡೆಗೆ ಹೊಸದಾಗಿ ಆರ್‌.ಓ.ಬಿ. ನಿರ್ಮಾಣಕ್ಕೆ, ಕಲಬುರಗಿ-ತಾಜಸುಲ್ತಾನಪುರ ನಡುವಿನ ಆರ್.ಯು.ಬಿ. ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ರೈಲ್ವೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇನ್ನುಳಿದಂತೆ ರೈಲು ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಛತೆ, ಎಸ್ಕೆಲೆಟರ್ ಸಮಸ್ಯೆ ಕೂಡಲೆ ಬಗೆಹರಿಸಲಾಗುವುದು ಎಂದರು.

ಇನ್ನು ವಾಡಿ ರೈಲ್ವೆ ನಿಲ್ದಾಣದಲ್ಲಿ ಪಟ್ಟಣ ಕಡೆಗಿನ ಪ್ರಯಾಣಿಕರು ಆರ್.ಓ.ಬಿ. ಹತ್ತಿ ಪ್ಲಾಟಫಾರ್ಮ್ ಪ್ರವೇಶಿಸಬೇಕಿತ್ತು.‌ ನೇರವಾಗಿ ಪ್ಲಾಟಫಾರ್ಮ್ ಪ್ರವೇಶ ಕಲ್ಪಿಸಲು ಪ್ಲಾಟಫಾರ್ಮ್ ವಿಸ್ತರಣೆ ಬಹುದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಇದಲ್ಲದೆ ಅಫಲಪೂರ ತಾಲೂಕಿನ ಕುಲಾಲಿ ಬಳಿ ದಶಕದ ಬೇಡಿಕೆ ಆರ್‌.ಯು.ಬಿ. ನಿರ್ಮಿಸಿದ್ದು, ಇದರಿಂದ ಕಬ್ಬು ಲಾರಿಗಳು ಸಂಚರಿಸಬಹುದಾಗಿದೆ ಎಂದು ಸೆಂಟ್ರಲ್ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ದಕ್ಷಿಣ ಮದ್ಯ ರೈಲ್ವೆ ವಿಭಾಗದಲ್ಲಿ ಬರುವ‌ ಜಿಲ್ಲೆಯ ಮಳಖೇಡನಲ್ಲಿ ಹೈಕ್ಲಾಸ್ ಪ್ಲಾಟಫಾರ್ಮ್ ನಿರ್ಮಿಸಲಾಗುತ್ತಿದೆ. ಸೇಡಂ ರೈಲ್ವೆ ನಿಲ್ದಾಣದಲ್ಲಿ ಪ್ಲಾಟಫಾರ್ಮ ಸಂಖ್ಯೆ-2ರ ಎತ್ತರ ಹೆಚ್ಚಿಸಬೇಕೆಂಬ ಬೇಡಿಕೆಗೆ ಡಿ.ಆರ್.ಎಂ ಕಚೇರಿ ಒಪ್ಪಿಗೆ ನೀಡಿದೆ. ಚಿತ್ತಾಪುರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನಾಲವಾರ ರೈಲು ನಿಲ್ದಾಣದ ಪ್ಲಾಟಫಾರ್ಮ್ 1 ರಲ್ಲಿ ಕೋಚ್ ಪೋಸಿಷನ್ ಇಂಡಿಕೇಷನ್ ಅಳವಡಿಸಿದೆ ಎಂದು ಗುಂತಕಲ್ ವಿಭಾಗದ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆಸಿದ ಸಂಸದ ಡಾ.ಉಮೇಶ ಜಾಧವ ಅವರು, ಎರಡನೇ ಪ್ಲಾಟಫಾರ್ಮ್ ನಲ್ಲಿಯೂ ಕೋಚ್ ಪೋಸಿಷನ್ ಇಂಡಿಕೇಷನ್ ಹಾಕಬೇಕು ಎಂದರು.

ಶಹಾಬಾದ ಬಳಿ ಆರ್‌.ಯು.ಬಿ ನಿರ್ಮಾಣಕ್ಕೆ ಒಪ್ಪಿಗೆ: ಶಹಾಬಾದ ರೈಲ್ವೆ ನಿಲ್ದಾಣದ ಬಳಿ ಚುನ್ನಾ ಬಟ್ಟಿ ಪ್ರದೇಶಕ್ಕೆ ಹೋಗಬೇಕಾದರೆ ಜನ ರೈಲ್ವೆ ಕ್ರಾಸ್ ಮಾಡಿ ಹೋಗುತ್ತಿದ್ದಾರೆ. ಕೂಡಲೆ ಅಲ್ಲಿ ಆರ್.ಯು.ಬಿ. ನಿರ್ಮಿಸಬೇಕು ಎಂದು ಸಂಸದರು ತಿಳಿಸಿದಾಗ, ಈಗಾಗಲೆ ಇದಕ್ಕೆ ಅನುಮೋದನೆ ಸಿಕ್ಕಿದೆ, ಕೆಲಸ‌ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಎಂ.ಎಲ್.ಸಿ ಬಿ.ಜಿ.ಪಾಟೀಲ, ಸುನೀಲ ವಲ್ಯಾಪುರೆ, ಶಶೀಲ ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕ ಸಿಕ್ರಿವಾಲ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ ಮಾಧವ ಗಿತ್ತೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಅನೇಕ ಅಧಿಕಾರಿಗಳು ಇದ್ದರು.

ವರ್ಷಾಂತ್ಯಕ್ಕೆ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕೆಲಸ‌ ಆರಂಭಿಸಬೇಕು: ಜೇವರ್ಗಿ ರಸ್ತೆಯ ಹೊನ್ನಕಿರಣಗಿ-ಫರಹತಾಬಾದ ಬಳಿ ಕೇಂದ್ರ ಸರ್ಕಾರದಿಂದ ನಿರ್ಮಿಸಲು ಉದ್ದೇಶಿಸಿರುವ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಇದೇ ವರ್ಷಾಂತ್ಯಕ್ಕೆ ಆರಂಭಿಸಲಿ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಸದ‌ ಡಾ.ಉಮೇಶ ಜಾಧವ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾರ್ಕ್ ಸ್ಥಾಪನೆಯಾದಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಲಿದ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 2 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಈಗಾಗಲೆ ಸೂರತ್-ಚೆನ್ನೈ ಎಕಾನಾಮಿಕ್ ಕಾರಿಡಾರ್ ಹೈವೇ ಕಾಮಗಾರಿ ಜೇವರ್ಗಿ ಮೂಲಕ ಹಾದು ಹೋಗುತ್ತಿರುವುದರಿಂದ ಹತ್ತಿ ರಪ್ತಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಭವಿಷ್ಯದಲ್ಲಿ ಹತ್ತಿ ಉದ್ಯಮದಲ್ಲಿ ಕಲಬುರಗಿ ದಾಪುಗಾಲು ಇಡಲಿದೆ ಎಂದರು.

ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಫೆನ್ಸಿಂಗ್ ಕಾರ್ಯ ಲೋಕೋಪಯೋಗಿ ಇಲಾಖೆ ಮಾಡುತ್ತಿದೆ. ನೀರಿನ ಸಮಸ್ಯೆ ಇದ್ದು, 76 ಎಂ.ಎಲ್.ಡಿ ನೀರಿನ ಅವಶ್ಯಕತೆ ಇದೆ. ಈಗಾಗಲೆ ಇಲ್ಲಿ ಹೂಡಿಕೆಗೆ 10 ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಎರಡನೇ ಸ್ಟೇಕ್ ಹೋಲ್ಡರ್ ಸಭೆ ಕರೆದಿದ್ದು, ಅಲ್ಲಿ ಇನ್ನು 10-12 ಕಂಪನಿಗಳ ಹೂಡಿಕೆಗೆ ಒಪ್ಪಿಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.