ರಂಗಾಯಣದಿಂದ ಗ್ರಾಮೀಣ ಪ್ರತಿಭೆಗಳಿಗೆ ಆದ್ಯತೆ ನೀಡುವ ಉದ್ದೇಶ-ಡಾ. ರಾಜು ತಾಳಿಕೋಟಿ

| Published : Aug 27 2024, 01:44 AM IST

ರಂಗಾಯಣದಿಂದ ಗ್ರಾಮೀಣ ಪ್ರತಿಭೆಗಳಿಗೆ ಆದ್ಯತೆ ನೀಡುವ ಉದ್ದೇಶ-ಡಾ. ರಾಜು ತಾಳಿಕೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಕಲೆ ಇಂದಿಗೂ ತನ್ನ ಜೀವಂತಿಕೆ ಉಳಿಸಿಕೊಂಡಿದೆ. ಎಲೆಮರೆಯ ಕಾಯಿಯಂತಿರುವ ಗ್ರಾಮೀಣ ಪ್ರತಿಭೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ ಸಂಚರಿಸಿ ಕಲಾವಿದರ ಮತ್ತು ರಂಗಾಸಕ್ತರ ಅಹವಾಲು ಆಲಿಸುತ್ತಿರುವೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ಡಾ. ರಾಜು ತಾಳಿಕೋಟಿ ಹೇಳಿದರು.

ಹಾವೇರಿ: ಗ್ರಾಮೀಣ ಪ್ರದೇಶದಲ್ಲಿ ಕಲೆ ಇಂದಿಗೂ ತನ್ನ ಜೀವಂತಿಕೆ ಉಳಿಸಿಕೊಂಡಿದೆ. ಎಲೆಮರೆಯ ಕಾಯಿಯಂತಿರುವ ಗ್ರಾಮೀಣ ಪ್ರತಿಭೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ ಸಂಚರಿಸಿ ಕಲಾವಿದರ ಮತ್ತು ರಂಗಾಸಕ್ತರ ಅಹವಾಲು ಆಲಿಸುತ್ತಿರುವೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ಡಾ. ರಾಜು ತಾಳಿಕೋಟಿ ಹೇಳಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ರಂಗಾಯಣ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಜರುಗಿದ ರಂಗಾಯಣದ ಕಾರ್ಯ ಚಟುವಟಿಕೆಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ದಶಕಗಳಿಂದ ರಂಗಭೂಮಿಗೆ ಸೇವೆ ಸಲ್ಲಿಸಿರುವೆ. ನನಗೆ ಕೊಟ್ಟಿರುವ ಜವಾಬ್ದಾರಿ ಹಿನ್ನೆಲೆಯಲ್ಲಿ ರಂಗಾಯಣದಿಂದ ಕಲಾವಿದರಿಗೆ ಮತ್ತು ಕಲಾವಿದರಿಂದ ರಂಗಾಯಣಕ್ಕೆ ಆಗಬೇಕಿರುವ ಕಾರ್ಯಗಳನ್ನು ಅರಿತುಕೊಳ್ಳಲು ಸಾಗುತ್ತಿರುವೆ. ಅದಕ್ಕಾಗಿ ಹಾವೇರಿಯಿಂದಲೇ ಶುರು ಮಾಡಿರುವೆ. ಉತ್ತರ ಕರ್ನಾಟಕದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಶ್ರಮಿಸುವೆ. ರಂಗಾಯಣದ ಬೈಲಾ ಅನ್ವಯ ಕಾರ್ಯೋನ್ಮುಖವಾಗುವೆ. ಅದಕ್ಕೆ ತಮ್ಮ ಸಹಕಾರ ಬಯಸುವೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ, ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಕಲಾವಿದರು ಒಂದೇ ತಾಯಿ ಮಕ್ಕಳು. ಕಲಾವಿದರ ಭಾವನೆಗಳಿಗೆ ಸ್ಪಂದಿಸಲು ರಂಗಾಯಣ ವಿನೂತನ ಯೋಜನೆ ರೂಪಿಸುತ್ತಿದೆ. ರೆಪರ್ಟರಿ ಸ್ಥಾಪಿಸಿ ಕಲಾವಿದರು ವರ್ಷವಿಡೀ ರಂಗ ಚಟುವಟಿಕೆಗಳಲ್ಲಿ ತೊಡಗಬೇಕಿದೆ. ಅನುಭವಿ ನಿರ್ದೇಶಕರೊಂದಿಗೆ ನಾಟಕಗಳನ್ನು ಕಟ್ಟುವ ಮೂಲಕ ಆದಾಯ ಸಂಗ್ರಹಿಸುವ ಗುರಿ ಇದೆ. ರಂಗಭೂಮಿ ಅವನತಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಕಲಾವಿದರು ವಿಘಟನೆಗೊಳ್ಳುತ್ತಿದ್ದಾರೆ. ಕಲಾವಿದರ ಮಧ್ಯೆ ಸಮನ್ವಯ ಸಾಧಿಸುವ ಸವಾಲನ್ನು ಮೀರಬೇಕಿದೆ ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ರಂಗಾಯಣ ನಿರ್ದೇಶಕರಾಗಿ ನೇಮಕವಾಗಿರುವ ಡಾ.ರಾಜು ತಾಳಿಕೋಟಿ ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂದು ಬಯಸಿ ಕಲಾವಿದರ ಬಳಿಗೆ ಬಂದಿರುವುದು ಶ್ಲಾಘನೀಯ. ಆಕರ್ಷಕ ವ್ಯಕ್ತಿತ್ವದ ಅವರು ರಂಗಾಯಣಕ್ಕೆ ಹೊಸ ಸ್ವರೂಪ ನೀಡಬಲ್ಲರು ಎಂಬ ವಿಶ್ವಾಸವಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭು ಗುರಪ್ಪನವರ, ಮಾಲತೇಶ ಅಂಗೂರ, ಚಂದ್ರಶೇಖರ ಹೆಬ್ಬಾರ, ನಾಗರಾಜ ಧಾರೇಶ್ವರ, ಸಿ.ಎಸ್. ಮರಳಿಹಳ್ಳಿ, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ, ಪರಿಮಳಾ ಜೈನ್, ಶಶಿಕಲಾ ಅಕ್ಕಿ, ಲತಾ ಪಾಟೀಲ, ಆರ್.ಸಿ. ನಂದಿಹಳ್ಳಿ, ಮುತ್ತಣ್ಣ ಹಿರೇಮಠ, ಶಂಕರ ತುಮ್ಮಣ್ಣನವರ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸಾಹಿತಿ ಕಲಾವಿದರ ಬಳಗದವರು ರಂಗಗೀತೆ ಪ್ರಸ್ತುತ ಪಡಿಸಿದರು. ವೈ.ಬಿ. ಆಲದಕಟ್ಟಿ ಸ್ವಾಗತಿಸಿದರು. ಮಂಜುನಾಥ ಸಣ್ಣಿಂಗಣ್ಣನವರ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.ಡಾ.ರಾಜು ತಾಳಿಕೋಟಿ ರಂಗಭೂಮಿಯ ಸಮಸ್ಯೆ ಅನುಭವಿಸಿದವರು. ಅದಕ್ಕಾಗಿ ಪರಿಹಾರ ಕೊಡಬಲ್ಲರು. ರಂಗಭೂಮಿ ಪುನಶ್ಚೇತನಕ್ಕೆ ರಂಗ ಕಮ್ಮಟ ಆಯೋಜಿಸಬೇಕು. ತಮ್ಮ ಅವಧಿಯಲ್ಲಿ ಉತ್ತಮ ಛಾಪು ಮೂಡಿಸುವರು ಎಂಬ ವಿಶ್ವಾಸವಿದೆ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಹೇಳಿದರು.ಸಮಾಲೋಚನಾ ಸಭೆಯಲ್ಲಿ ಕಲಾವಿದರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ವೇಳೆ ದೊಡ್ಡಾಟದ ಕಮ್ಮಟಗಳು ಜರುಗಬೇಕು. ವೃತ್ತಿ ನಾಟಕ ಕಂಪನಿಗೆ ಸರ್ಕಾರ ಪ್ರೋತ್ಸಾಹಿಸಬೇಕು. ಹಾವೇರಿ ಜಿಲ್ಲೆಯಲ್ಲೂ ರಂಗಾಯಣದ ಶಾಖೆ ತೆರೆಯಬೇಕು. ವಿದ್ಯಾರ್ಥಿಗಳಿಗಾಗಿ ಕಾಲೇಜು ರಂಗೋತ್ಸವ ಮತ್ತು ಯುವ ಚೇತನ ಶುರು ಮಾಡಬೇಕು. ಬೀದಿ ನಾಟಕ ಕಲಾವಿದರನ್ನು ಗುರುತಿಸಬೇಕು. ನಾಟಕ ರಚಿಸುವ ಬರಹಗಾರರ ಸಾಹಿತ್ಯವನ್ನು ಪ್ರಕಟಿಸಬೇಕು. ರಂಗ ಶಿಕ್ಷಕರನ್ನು ನೇಮಿಸಬೇಕು. ಕಲಾವಿದರಿಗೆ ಮಂಜೂರಾಗುವ ಸೌಲಭ್ಯಗಳ ದುರ್ಬಳಕೆ ತಡೆಯಬೇಕು. ಹಾವೇರಿ ನಗರಕ್ಕೊಂದು ಪ್ರತ್ಯೇಕ ರಂಗ ಮಂದಿರ ಕಟ್ಟಡ ಮಂಜೂರಾಗಬೇಕು. ಕಲಾವಿದರಿಗೆ ಗುರುತಿನ ಚೀಟಿ ವಿತರಿಸಬೇಕು. ಬಾಲ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂಬುದು ಸೇರಿದಂತೆ ಹಲವು ಕಲಾವಿದರು ತಮ್ಮ ಅನಿಸಿಕೆಗಳನ್ನು ರಂಗಾಯಣ ನಿರ್ದೇಶಕರ ಗಮನಕ್ಕೆ ತಂದರು.