ಸಾರಾಂಶ
ಕಾಂತರಾಜ ವರದಿಯೇ ಇಲ್ಲದೆ ಜಾತಿ ಗಣತಿ ಪ್ರಕಟಣೆ ಕೇವಲ ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ.
ಹಾನಗಲ್ಲ: ಜಾತಿ ಗಣತಿ ಹೆಸರಿನಲ್ಲಿ ಹಿಂದುಗಳ ಸಂಖ್ಯೆ ಇಳಿಸುವ, ಮುಸ್ಲಿಂ ಜನಸಂಖ್ಯೆ ಹೆಚ್ಚೆಂದು ಬಿಂಬಿಸಿ ತುಷ್ಟೀಕರಣ ಮಾಡುವ ಸಿದ್ಧರಾಮಯ್ಯ ಸರ್ಕಾರದ ನೀತಿ ಖಂಡನೀಯ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತ್ಯೇಕ ಲಿಂಗಾಯತ ಜಾತಿ ಗಣತಿ ಮಾಡುತ್ತೇವೆ ಎಂದು ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ದೇಶಮುಖ ಸ್ಪಷ್ಟಪಡಿಸಿದರು.
ಶನಿವಾರ ಪಟ್ಟಣದ ಶ್ರೀಕುಮಾರೇಶ್ವರ ವಿರಕ್ತಮಠದ ಸದಾಶಿವ ಮಂಗಲ ಭವನದಲ್ಲಿ ಮಹಾಸಭಾದ ತಾಲೂಕು ಘಟಕ ಹಾಗೂ ಲಿಂಗಾಯತ ವಿವಿಧ ಉಪಜಾತಿ ಸಮುದಾಯಗಳ ಮುಖಂಡರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂತರಾಜ ವರದಿಯೇ ಇಲ್ಲದೆ ಜಾತಿ ಗಣತಿ ಪ್ರಕಟಣೆ ಕೇವಲ ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಂದುಗಳನ್ನು ಒಡೆದಾಳುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಇದರ ಘೋರ ಪರಿಣಾಮ ಸರ್ಕಾರದ ಮೇಲೆ ಆಗಲಿದೆ. ಈಗಿರುವ ವರದಿ ಮುಸ್ಲಿಂ ಸಮುದಾಯ ಬಿಟ್ಟರೆ ಉಳಿದಾವುದೇ ಸಮುದಾಯ ಒಪ್ಪಿಕೊಳ್ಳುವಂತಹದ್ದಲ್ಲ. ಇಲ್ಲಿ ನೀಡಿರುವ ಅಂಕಿ -ಸಂಖ್ಯೆಗಳು ಕಪೋಲ ಕಲ್ಪಿತ ಎಂದು ಮೇಲ್ನೋಟಕ್ಕೆಯೇ ಸಾಬೀತಾಗಿದೆ ಎಂದರು.ಪ್ರತಿಭಟನೆ :
ಈಗಿರುವ ಜಾತಿ ಗಣತಿಯನ್ನು ರಾಜ್ಯದ ಬಹುತೇಕ ಶಾಸಕರೇ ಪಕ್ಷ ಭೇದವಿಲ್ಲದೆ ತಿರಸ್ಕರಿಸಿದ್ದಾರೆ. ಮೇ 2ರಂದು ಇದನ್ನು ಸ್ವೀಕರಿಸುವ ಬಿಡುವ ನಿರ್ಣಯ ಸರ್ಕಾರದ ಮಟ್ಟದಲ್ಲಿ ಆಗಲಿದೆ ಎಂಬ ಮಾಹಿತಿ ಇದೆ. ಹಾಗೇನಾದರೂ ಈ ವರದಿ ತಿರಸ್ಕರಿಸದಿದ್ದರೆ ಮೇ 12 ರಂದು ಹಾನಗಲ್ಲ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು. ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ 102 ಉಪ ಪಂಗಡಗಳು ಒಂದಾಗಿ ಇಡೀ ರಾಜ್ಯಾದ್ಯಂತ ಹೋರಾಟ ಮಾಡುವ ಸಿದ್ಧತೆಯೂ ಇದೆ. ವೀರಶೈವ ಲಿಂಗಾಯತರ ವಿಷಯದಲ್ಲಿ ಯಾವುದೇ ಸರ್ಕಾರ ಅನ್ಯಾಯದ ದಾರಿ ಹಿಡಿದರೆ ನಾವು ಕೂಡ ಪ್ರತಿರೋಧದ ದಾರಿ ಹಿಡಿಯುವುದು ಕೂಡ ತೀರ ಅನಿವಾರ್ಯ ಎಂದು ಶಿವಕುಮಾರ ದೇಶಮುಖ ಎಚ್ಚರಿಸಿದರು.ವಿವಿಧ ಉಪ ಪಂಗಡಗಳ ಮುಖಂಡರಾದ ನ್ಯಾಯವಾದಿ ಎಸ್.ಎಂ. ಕೋತಂಬರಿ, ರಮೇಶಗೌಡ ಪಾಟೀಲ, ರವಿ ಪಾಟೀಲ, ಮಹೇಶ ಜವಳಿ, ಕುಮಾರ ಹತ್ತಿಕಾಳ, ಎಸ್.ಜಿ. ವಿಶ್ವನಾಥ, ಭೀಮನಗೌಡ ಪಾಟೀಲ, ಮಧುಮತಿ ಪೂಜಾರ, ನಿರ್ಮಲಾ ಕಬ್ಬೂರ, ಶಿವಯೋಗಿ ಸವದತ್ತಿ, ಶಿವಯೋಗಿ ಅರಳಲೆಮಠ, ಶಿವಾನಂದಯ್ಯ ಸಂಗೂರಮಠ, ಕುಮಾರ ನೆಲ್ಲಿಕೊಪ್ಪ, ಮಲ್ಲನಗೌಡ ಪಾಟೀಲ ಮೊದಲಾದವರು ಇದ್ದರು.