ಸಾರಾಂಶ
ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತಾ ಮಾಹಿತಿ । ಕುವೆಂಪು ವಿವಿ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ 86 ಕಾಲೇಜು ಕ್ರಿಡಾಪಟುಗಳು ಭಾಗಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಕುವೆಂಪು ವಿವಿ, ರಾಷ್ಟ್ರೀಯ ಶಿಕ್ಷಣ ಸಮಿತಿ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಡಿ. 10ರಿಂದ 12ರವರೆಗೆ ಕುವೆಂಪು ವಿಶ್ವವಿದ್ಯಾಲಯದ 36ನೇ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ಅಥ್ಲೆಟಿಕ್ಸ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತಾರವರು ತಿಳಿಸಿದರು.
ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಗರದ ನೆಹರು ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿದ್ದು, ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಟ್ಟು 86 ಕಾಲೇಜುಗಳ ಸುಮಾರು 800 ರಿಂದ 1000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇವರಲ್ಲಿ 530 ವಿದ್ಯಾರ್ಥಿಗಳಿದ್ದು, 470 ವಿದ್ಯಾರ್ಥಿನಿಯರಿದ್ದಾರೆ. 150 ಜನ ಅಧಿಕಾರಿ ವರ್ಗ ಮತ್ತು ತಾಂತ್ರಿಕ ವರ್ಗ, 100 ಜನ ಸ್ವಯಂಸೇವಕರು ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.ಇದರಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಹಾಗೂ ದೇಶೀಯ ವಿದ್ಯಾಶಾಲಾ ಸಂಸ್ಥೆಯ ಅಡಿಯಲ್ಲಿ ಬರುವ ಶಾಲಾ ಕಾಲೇಜುಗಳಲ್ಲಿ ಹಾಗೂ ವಿದ್ಯಾರ್ಥಿನಿ ಕ್ರೀಡಾಪಟುಗಳಿಗೆ ಕಮಲಾ ನೆಹರು ಮಹಿಳಾ ಕಾಲೇಜು, ಕಸ್ತೂರಬಾ ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅಧಿಕಾರಿಗಳಿಗೆ ಕಾಲೇಜು ವತಿಯಿಂದ ಕ್ರೀಡಾಂಗಣದಲ್ಲೇ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಡಿ. 9ರಂದು ರಾತ್ರಿ 7.30ಕ್ಕೆ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕಾಲೇಜುಗಳ ವ್ಯವಸ್ಥಾಪಕರ ಸಭೆಯನ್ನು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಕರೆಯಲಾಗಿದೆ. ಈಗಾಗಲೇ ಎಲ್ಲಾ ಕಾಲೇಜುಗಳಿಗೆ ಪ್ರವೇಶ ಪತ್ರಗಳನ್ನು ಕಳುಹಿಸಲಾಗಿದೆ. ಕ್ರೀಡಾಪಟುಗಳು ತಮ್ಮ ಕಾಲೇಜುಗಳ ಧ್ವಜ, ಸಮವಸ್ತ್ರದೊಂದಿಗೆ, ತಮ್ಮ ತಂಡದ ವ್ಯವಸ್ಥಾಪಕರೊಂದಿಗೆ ಡಿ.10ರ ಬೆಳಗ್ಗೆ 8ಕ್ಕೆ ಸರಿಯಾಗಿ ಕ್ರೀಡಾಂಗಣದಲ್ಲಿ ತಪ್ಪದೇ ಹಾಜರಾಗಲು ಸೂಚಿಸಲಾಗಿದೆ ಎಂದು ತಿಳಿಸಿದರು.ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಆರೋಗ್ಯ ತಪಾಸಣೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಉಳಿದಂತೆ ನೀರಿನ ವ್ಯವಸ್ಥೆಗೆ ಮಹಾನಗರಪಾಲಿಕೆಯನ್ನು ಕೋರಲಾಗಿದೆ ಎಂದರು.
ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕ್ರೀಡಾಪಟುಗಳಿಗೆ ಫಿಟ್‌ನೆಸ್ ಮತ್ತು ಆರೋಗ್ಯ ತಪಾಸಣಾ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಲು ಈಗಾಗಲೇ ತಿಳಿಸಿದೆ. ಒಂದು ವೇಳೆ ದೃಢೀಕರಣ ಪತ್ರವನ್ನು ತರದೇ ಇದ್ದಲ್ಲಿ ಆಯಾ ಕಾಲೇಜಿನ ಪ್ರಾಂಶುಪಾಲರು, ವ್ಯಯವಸ್ಥಾಪಕರೇ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದರು.ಈ ಕ್ರೀಡಾಕೂಟಕ್ಕೆ ಮಹಿಳಾ ಕ್ರೀಡಾಪಟುಗಳ ವಸತಿ ವ್ಯವಸ್ಥೆ ಮಾಡಿರುವ ಶಾಲಾ ಕಾಲೇಜುಗಳಿಗೆ, ಕ್ರೀಡಾಕೂಟ ನಡೆಯುವ ನೆಹರು ಕ್ರೀಡಾಂಗಣಕ್ಕೆ ರಕ್ಷಣಾ ವ್ಯವಸ್ಥೆಗಾಗಿ, ಜಿಲ್ಲಾ ಪೋಲೀಸ್ ಇಲಾಖೆಯನ್ನು ಕೋರಲಾಗಿದೆ. ಕ್ರೀಡಾಕೂಟಕ್ಕೆ ತುರ್ತು ಪ್ರಥಮ ಚಿಕಿತ್ಸೆಗಾಗಿ ನಂಜಪ್ಪ ಆಸ್ಪತ್ರೆ ಹಾಗೂ ಸರ್ಜಿ ಆಸ್ಪತ್ರೆಯ ಆಡಳಿತ ವರ್ಗವನ್ನು ಕೋರಿದ್ದು, ಅಗತ್ಯ ಆಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ಔಷಧೋಪಚಾರದೊಂದಿಗೆ ನುರಿತ ಸಿಬ್ಬಂದಿಯನ್ನು ನಿಯೋಜಿಸಲಿದ್ದಾರೆ ಎಂದರು.
ಡಿ.12ರಂದು ಸಂಜೆ 3.30ಕ್ಕೆ ಕ್ರೀಡಾಕೂಟದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಎನ್ ಡಿ. ವಿರುಪಾಕ್ಷ, ರವೀಂದ್ರ ಗೌಡ, ಕೆ..ಎಂ.ನಾಗರಾಜ್ ಇದ್ದರು.
- - -