ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಪದವಿ ಕಾಲೇಜುಗಳ ಸಹಕಾರದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಅಂತರ್ ಕಾಲೇಜು ಸಮೂಹ ಗಾಯನ ಸ್ಪರ್ಧೆ ಶುಕ್ರವಾರ ನಡೆಯಿತು.ಕೊಡ್ಲಿಪೇಟೆಯ ಪ್ರಥಮ ದರ್ಜೆ ಕಾಲೇಜು, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜು, ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜು, ವಿರಾಜಪೇಟೆಯ ಕಾವೇರಿ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳು ಸಮೂಹ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು(ಪ್ರಥಮ), ಕುಶಾಲನಗರದ ಅನುಗ್ರಹ ಪ್ರಥಮ ದರ್ಜೆ ಕಾಲೇಜು(ದ್ವಿತೀಯ), ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು (ತೃತೀಯ) ಸ್ಥಾನ ಪಡೆದರು.ಸಮೂಹ ಗಾಯನ ಸ್ಪರ್ಧಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲ ಪ್ರೊ.ರಾಘವ ಅವರು ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಹೆಸರಿನಲ್ಲಿ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಮೂಹ ಗಾಯನ ಏರ್ಪಡಿಸಿರುವುದು ವಿಶೇಷ ಎಂದರು.
ನಾಡಿನಲ್ಲಿ ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಉಳಿದುಕೊಂಡು ಬಂದಿದೆ. ಕನ್ನಡ ಭಾಷೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಕನ್ನಡ ಭಾಷೆಗೆ ತನ್ನದೇ ಆದ ಮಹತ್ವವಿದೆ ಎಂದರು.ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದೆ ಎಂದು ಕವಿರಾಜ ಮಾರ್ಗಕಾರ 10ನೇ ಶತಮಾನದಲ್ಲಿಯೇ ಹೇಳಿದ್ದಾರೆ. ಕನ್ನಡ ಭಾಷಿಕರು ಎಲ್ಲೆಡೆ ಇದ್ದಾರೆ ಎಂದು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಗಿರೀಶ್, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಮಾತನಾಡಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಡ ದಿನು, ಚೊಟ್ಟೆಯಂಡಮಾಡ ಸಂಜು, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ವಿನೋದ್ ಮೂಡಗದ್ದೆ ಇದ್ದರು.
ಸೀತಾಲಕ್ಷ್ಮಿ, ಜಯಲಕ್ಷ್ಮಿ, ವಂದನಾ ಪೊನ್ನಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಹಾಡು ಹಾಡಿದರು. ನೋಡಲ್ ಅಧಿಕಾರಿ ರೇಣುಶ್ರೀ ಮತ್ತು ರಮೇಶ್ ಕಾರ್ಯಕ್ರಮ ನಡೆಸಿಕೊಟ್ಟರು.