ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಸತತ 13ನೇ ಬಾರಿಗೆ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅಂತರ್‌ಶಾಲಾ ರಸಪ್ರಶ್ನೆ ಸ್ಪರ್ಧೆ ‘ಜಿ ಎಮ್ ಕ್ವಿಜ್ ಫೆಸ್ಟ್ 2026’ ನ್ನು ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಸತತ 13ನೇ ಬಾರಿಗೆ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅಂತರ್‌ಶಾಲಾ ರಸಪ್ರಶ್ನೆ ಸ್ಪರ್ಧೆ ‘ಜಿ ಎಮ್ ಕ್ವಿಜ್ ಫೆಸ್ಟ್ 2026’ ನ್ನು ಆಯೋಜಿಸಲಾಗಿತ್ತು. ಮಣಿಪಾಲ ನರ್ಸಿಂಗ್ ಕಾಲೇಜಿನ ಹಿರಿಯ ಪ್ರಾಧ್ಯಾಪಕಿ, ಸಂಶೋಧನೆ ಮತ್ತು ಸಹಯೋಗದ ಮುಖ್ಯಸ್ಥೆ ಡಾ.ಅನಿಸ್ ಜಾರ್ಜ್ ಅವರು ಜಿಎಮ್ ಕ್ವಿಜ್ ಫೆಸ್ಟ್‌ನ್ನು ಉದ್ಘಾಟಿಸಿ ಮಾತನಾಡುತ್ತಾ, ರಸಪ್ರಶ್ನೆ ಸ್ಪರ್ಧೆಯು ಕುತೂಹಲ, ಉತ್ಸಾಹ, ಆರೋಗ್ಯಕರ ಸ್ಪರ್ಧಾ ಮನೋಭಾವ ಮತ್ತು ಕಲಿಕೆಯ ವಾತಾವರಣವನ್ನು ಸೃಷ್ಟಿಸುವುದರ ಜೊತೆಗೆ ಪಠ್ಯಕ್ರಮದ ಹೊರತಾಗಿಯೂ ವಿವಿಧ ವಿಷಯಗಳನ್ನು ತಿಳಿದುಕೊಳ್ಳಲು ಮತ್ತು ಅನ್ವೇಷಿಸಲು ನೆರವಾಗುತ್ತದೆ. ಇಲ್ಲಿ ಪಡೆದ ಜ್ಞಾನದಿಂದ ಸೃಜನಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳುವುದರ ಮೂಲಕ ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಕರೆ ನೀಡಿದರು.ಶಾಲಾ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ರಾಜ್ಯದ ವಿವಿಧ ಶಾಲೆಗಳಿಂದ ಆಗಮಿಸಿದ ಎಲ್ಲಾ ಸ್ಪರ್ಧಿಗಳಿಗೆ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಗ್ರೇ ಕ್ಯಾಪ್ಸ್ ರಶ್ಮಿ ಫುರ್ಟಾಡೋ ರಸ ಪ್ರಶ್ನೆ ಸ್ಪರ್ಧೆಯನ್ನು ಅತ್ಯಂತ ಆಕರ್ಷಕವಾಗಿ ನಿರ್ವಹಿಸಿದರು. ಜಿ ಎಮ್ ಗ್ಲೋಬಲ್ ಸ್ಕೂಲ್‌ನ ಟ್ರಸ್ಟಿ ಪ್ರಣವ್ ಶೆಟ್ಟಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಿದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ಉಡುಪಿ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಸುಮಾರು 18 ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್, ಶ್ರೀಮಾ ಪ್ರಣವ್ ಶೆಟ್ಟಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಫಲಿತಾಂಶ ಹೀಗಿದೆ:ಶಿಕ್ಷಕರ ವಿಭಾಗದಲ್ಲಿ ಶಾರದಾ ವಿದ್ಯಾಲಯ ಕೊಡಿಯಲ್‌ಬೈಲ್ ಮಂಗಳೂರು ಪ್ರಥಮ, ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ಹಂಪನಕಟ್ಟೆ ಮಂಗಳೂರು ದ್ವಿತೀಯ ಹಾಗೂ ವಿದ್ಯಾರ್ಥಿಗಳ ವಿಭಾಗದಲ್ಲಿ ಕ್ರೈಸ್ಟ್ ಸ್ಕೂಲ್ ಮಣಿಪಾಲ್ ಪ್ರಥಮ, ಸೈಂಟ್ ಥೆರೆಸಾ ಸ್ಕೂಲ್ ಬೆಂದೂರು ಮಂಗಳೂರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.