ಫೆ.13ರಿಂದ ಅಂತರ್‌ ಮಹಾವಿದ್ಯಾಲಯ ಯುವಜನೋತ್ಸವ

| Published : Feb 11 2024, 01:45 AM IST

ಸಾರಾಂಶ

ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಫೆ.13ರಂದು ಬೆ.11ಕ್ಕೆ ರಂಗಕರ್ಮಿ ಹಾಗೂ ಖ್ಯಾತ ಚಲನಚಿತ್ರ ನಟ ವೈಜನಾಥ ಬಿರಾದಾರ ಯುವಜನೋತ್ಸವಕ್ಕೆ ಚಾಲನೆ ನೀಡುವರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಅಂತರ್‌ ಮಹಾವಿದ್ಯಾಲಯ ಯುವಜನೋತ್ಸವ-2024 ಕಾರ್ಯಕ್ರಮವನ್ನು ಫೆ. 13 ರಿಂದ 15ರ ವರೆಗೆ ಆಯೋಜಿಸಲಾಗಿದ್ದು, ವಿದ್ಯಾರ್ಥಿ ಕಲಾವಿದರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ವಿಭಿನ್ನ ಕಲಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕಾರ್ಯಸೌಧದ ರಾಧಾಕೃಷ್ಣ ಸಭಾಂಗಣದಲ್ಲಿಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವಜನೋತ್ಸವ ಲಾಂಚನ ಬಿಡುಗಡೆಗೊಳಿಸಿ ಮಾತನಾಡಿ, ಯುವಜನೋತ್ಸವದಲ್ಲಿ ಸಾಂಸ್ಕೃತಿಕ ವಾತವರಣ ನಿರ್ಮಿಸಲು ಪ್ರಾಣಿಶಾಸ್ತ್ರ ವಿಭಾಗದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಜನಪದ ಕಲಾ ತಂಡಗಳ ನೃತ್ಯ ಮತ್ತು ವಾದ್ಯ ಮೇಳಗಳ ಮೆರವಣಿಗೆ ಜರುಗಲಿದೆ. ನಂತರ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಫೆ.13ರಂದು ಬೆ.11ಕ್ಕೆ ರಂಗಕರ್ಮಿ ಹಾಗೂ ಖ್ಯಾತ ಚಲನಚಿತ್ರ ನಟ ವೈಜನಾಥ ಬಿರಾದಾರ ಯುವಜನೋತ್ಸವ ಉದ್ಘಾಟಿಸಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಲಿದ್ದು ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು.

ಸಿಂಡಿಕೇಟ್ ಸದಸ್ಯೆ ಪ್ರೊ. ಸಿ. ಸುಲೋಚನಾ, ವಿದ್ಯಾವಿಷೇಯಕ ಪರಿಷತ್ ಸದಸ್ಯ ಪ್ರೊ. ಜೆ. ಉಮಾವತಿ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಕುಲಸಚಿವ ಡಾ. ಬಿ. ಶರಣಪ್ಪ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಪ್ರೊ. ಕೆ.ಲಿಂಗಪ್ಪ ಉಪಸ್ಥಿತರಿರುವರು ಎಂದರು.

ಯುವಜನೋತ್ಸವದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ವೃತ್ತಿ ಕಲೆ, ದೃಶ್ಯ ಕಲೆ, ಪೋಟೋಗ್ರಾಫಿ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ. ವೈವಿಧ್ಯಮಯವಾದ 27 ಬಗೆಯ ಸಾಂಸ್ಕೃತಿಕ ಸ್ಪರ್ಧೆಗಳು ಮಹಾತ್ಮ ಗಾಂಧಿ ಸಭಾಂಗಣ, ಭಾಸ್ಕರ್ ಸಭಾಂಗಣ, ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರುಗಲಿವೆ. ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳು ಒಳಗೊಂಡಂತೆ ಪದವಿ ಮಹಾವಿದ್ಯಾಲಯಗಳ 20 ಕಾಲೇಜುಗಳ ಸುಮಾರು 500 ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಲಿದ್ದಾರೆ ಎಂದರು.

ವಿದ್ಯಾರ್ಥಿ ಕಲಾವಿದರಿಗೆ ವೃಂದ ಗಾಯನ (ಭಾರತೀಯ), ಏಕವ್ಯಕ್ತಿ ಸ್ವರ ಗಾಯನ (ಪಾಶ್ಚಿಮಾತ್ಯ) ವೃಂದ ಗಾಯನ (ಪಾಶ್ಚಿಮಾತ್ಯ), ರಸಪ್ರಶ್ನೆ, ಅಂಟು ಪತ್ರಗಳ ತಯಾರಿಕೆ (ಪೋಸ್ಟರ್ ಮೇಕಿಂಗ್), ಮಣ್ಣಿನ ಆಕೃತಿ (ಕ್ಲೇ ಮಾಡೆಲಿಂಗ್) ಪ್ರಹಸನ (ಸ್ಕಿಟ್) ಏಕಾಂಕ ನಾಟಕ (ಒನ್ ಆಕ್ಟ್ ಪ್ಲೇ) ಶಾಸ್ತ್ರೀಯ ಏಕವ್ಯಕ್ತಿ ಗಾಯನ, ಕ್ಲಾಸಿಕಲ್ ಇನ್‌ಸ್ಟ್ರುಮೆಂಟಲ್ ಸೋಲೋ, ಲಘು ಸಂಗೀತ, ಜಾನಪದ ಸಂಗೀತ, ವಾಕ್ಪಟುತ್ವ, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಛಾಯಾಚಿತ್ರ ಸ್ಪರ್ಧೆ, ಪ್ರತಿಷ್ಠಾಪನಾ ಕಲೆ, ಮೆಹಂದಿ, ಪೇಂಟಿಂಗ್, ರಂಗೋಲಿ, ಮೂಕಾಭಿನಯ, ಅನುಕರಣೆ, ಶಾಸ್ತ್ರೀಯ ನೃತ್ಯ, ಜಾನಪದ ಅಥವಾ ಬುಡಕಟ್ಟು ಶೈಲಿ ನೃತ್ಯ, ಕೋಲಾಜ್ ಹಾಗೂ ಕಾರ್ಟೂನಿಂಗ್ ಸ್ಪರ್ಧೆಗಳು ನಡೆಯಲಿವೆ.

ಫೆ.15ರಂದು ಮ.2ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಯುವಜನೋತ್ಸವ-2024 ಸಮಾರೋಪ ಸಮಾರಂಭ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ಗಾಯಕ ಶ್ರೀ. ರಾಮಚಂದ್ರ ಜಿ. ಹಡಪದ ಆಗಮಿಸಲಿದ್ದು, ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು. ಸಿಂಡಿಕೇಟ್ ಸದಸ್ಯ ಪ್ರೊ. ದೇವಿದಾಸ ಜಿ. ಮಾಲೆ, ವಿದ್ಯಾವಿಷೇಯಕ ಪರಿಷತ್ ಸದಸ್ಯ ಪ್ರೊ. ಅಬ್ದುಲ್ ರಬ್ ಉಸ್ತಾದ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ, ಕುಲಸಚಿವ ಡಾ. ಬಿ. ಶರಣಪ್ಪ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಪ್ರೊ. ಕೆ. ಲಿಂಗಪ್ಪ ಉಪಸ್ಥಿತರಿರುವರು. ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಅಮೋಘ ಪ್ರತಿಭೆ ಪ್ರದರ್ಶನ ನೀಡಿ ವಿಜೇತರಾದ ಯುವ ಪ್ರತಿಭೆಗಳಿಗೆ ಅತಿಥಿ ಗಣ್ಯರು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸುವರು. ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆಯಲ್ಲಿ ಹಲವು ಸಮಿತಿಗಳು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರೈಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ. ಬಿ. ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಪ್ರೊ. ಕೆ. ಲಿಂಗಪ್ಪ ಹಾಗೂ ಮಾಧ್ಯಮ ಸಮಿತಿ ಸಂಚಾಲಕ ಡಾ. ಕೆ. ಎಂ. ಕುಮಾರಸ್ವಾಮಿ ಇದ್ದರು.

ವಿದ್ಯಾರ್ಥಿಗಳಲ್ಲಿ ದೇಶದ ಸಂಸ್ಕøತಿ ಮತ್ತು ಪರಂಪರೆಯ ಮೌಲ್ಯಗಳನ್ನು ಬಿಂಬಿಸಲು ಅಂತರ ಮಹಾವಿದ್ಯಾಲಯ ಯುವಜನೋತ್ಸವ ಆಯೋಜಿಸಲಾಗಿದೆ. ವಿದ್ಯಾರ್ಥಿ ಕಲಾವಿದರ ಪ್ರತಿಭೆ ಅನಾವರಣ ಮತ್ತು ಪ್ರೋತ್ಸಾಹಿಸುವ ಮೂಲಕ ಅವರನ್ನು ಪಠ್ಯೇತರ ಚಟುವಟಿಕೆಗಳ ಕಡೆಗೆ ತೊಡಗಿಸಿ ಸಾಂಸ್ಕೃತಿಕ ವಲಯಗಳಿಗೆ ಪರಿಚಯಿಸಿಕೊಳ್ಳಲು ಯುವಜನೋತ್ಸವ ವೇದಿಕೆಯಾಗಿದೆ. ಜೊತೆಗೆ ವಿವಿಯಲ್ಲಿ ಉದ್ಯೋಗ ಕೌಶಲ್ಯ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಿಂಡಿಕೇಟ್ ಒಪ್ಪಿಗೆ ಸಿಕ್ಕಿದೆ. ಭಾರತೀಯ ವಿಶ್ವವಿದ್ಯಾಲಯಗಳ ಸಂಸ್ಥೆ ಸಹಯೋಗದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ .ರಾಷ್ಟ್ರೀಯ ‘ಕವಾಲಿ ಸ್ಪರ್ಧೆ’ ಆಯೋಜಿಸಲು ಈಗಾಗಲೇ ಸಿದ್ಧತೆ ನಡೆದಿದೆ. ವಿವಿಯಲ್ಲಿ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದ ರೋಸ್ಟರ್ ಪ್ರತಿಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ.