ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿನ ಮೀಟರ್ ಬಡ್ಡಿ ಪ್ರಭಾವ ರೈಲ್ವೆ ಇಲಾಖೆ, ಖಾಸಗಿ ಸಂಸ್ಥೆಗಳಿಗೂ ಹಬ್ಬಿದೆ. ರೈಲ್ವೆ ಇಲಾಖೆಯಲ್ಲಿ ಯಾವಾಗ ಸಂಬಳ ದಿನ ಇದೆ ಎಂದು ತಿಳಿದುಕೊಂಡು ಹೋದರೆ ಸಾಕು, ಸಾಲುಗಟ್ಟಲೇ ಬಡ್ಡಿ ವಸೂಲಿಕೋರರೇ ನಿಂತಿರುತ್ತಾರೆ.
ಮೀಟರ್ ಬಡ್ಡಿ ಮಾಫಿಯಾದೊಳಗೆ ಸಿಲುಕಿರುವ ರೈಲ್ವೆ ನೌಕರರು ಸಾಕಷ್ಟು ಜನ. ಇವರಿಗೆ ಶೇ. 5ರಿಂದ ಶೇ.10ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಾರೆ. ಹಾಗಂತ ಎಲ್ಲರೂ ಬಡ್ಡಿಗೆ ಸಾಲ ಪಡೆದಿದ್ದಾರೆ ಎಂದರ್ಥವಲ್ಲ. ಆದರೆ ಕ್ಲಾಸ್ ಸಿ, ಡಿ ಗ್ರೂಪ್ ನೌಕರರಲ್ಲಿ ಬಹುತೇಕರು ಸಾಲದ ಸುಳಿಗೆ ಸಿಲುಕಿರುವುದುಂಟು. ಹೀಗಾಗಿ ಸಂಬಳದ ದಿನ ವರ್ಕ್‌ಶಾಪ್ ಹಾಗೂ ಡೀಸೆಲ್ ಲೋಕೋಶೆಡ್‌ಗಳಲ್ಲಿ ಬಡ್ಡಿ ಕುಳ ವಸೂಲಿಕೋರರು ಗೇಟ್ ಹೊರಗೆ ನಿಂತಿರುತ್ತಾರೆ. ಸಂಬಳ ಬರುತ್ತಿದ್ದಂತೆ ಇವರನ್ನು ಎಟಿಎಂಗೆ ಕರೆದುಕೊಂಡು ಹೋಗಿ ಸಾಲದ ಬಡ್ಡಿ, ಅಥವಾ ಅಸಲು ಪಡೆದುಕೊಂಡೇ ಅಲ್ಲಿಂದ ತೆರಳುತ್ತಾರೆ.ಇವರು ಸಾಲ ನೀಡುವ ಮುನ್ನ ಅನಧಿಕೃತ ಒಪ್ಪಂದ ಪತ್ರ ಮಾಡಿಕೊಳ್ಳುವುದರ ಜತೆ ಜತೆಗೆ ಪಾಸ್‌ಬುಕ್ ಸಹ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಸಂಬಳದ ದಿನ ತಪ್ಪದೇ ಬಡ್ಡಿ ಕಟ್ಟಲೇಬೇಕು. ಇಲ್ಲದಿದ್ದಲ್ಲಿ ಹೊಡೆದಾಟಗಳೇ ನಡೆದಿರುವುದುಂಟು.
ಇನ್ನು ರೈಲ್ವೆ ನೌಕರರಿಗೆ ಇಂತಿಷ್ಟು ತಿಂಗಳಿಗೆ ಎಂದು ಸಾಲ ನೀಡಿದ್ದರೆ ಅವರು ಅಷ್ಟೇ ತಿಂಗಳಿಗೆ ಬಗೆಹರಿಸಬೇಕು. ಒಂದು ವೇಳೆ 6 ತಿಂಗಳಿಗೆ ಪಡೆದು 2 ಅಥವಾ 3 ತಿಂಗಳಿಗೆ ದುಡ್ಡು ಅಡ್ಜೆಸ್ಟ್ ಆಗಿ ಮರಳಿ ನೀಡಲು ಮುಂದಾದರೂ ಸಹ ಆರು ತಿಂಗಳು ಬಡ್ಡಿ ನೀಡಲೇಬೇಕು. ಎರಡೇ ತಿಂಗಳಿಗೆ ಬಗೆಹರಿಸುತ್ತಾರೆ ಎಂದು ಎರಡು ತಿಂಗಳ ಬಡ್ಡಿಯನ್ನಷ್ಟೇ ಮುರಿದುಕೊಳ್ಳುವುದಿಲ್ಲ. ಒಪ್ಪಂದದಂತೆ ಆರು ತಿಂಗಳು ಬಡ್ಡಿ ಕೊಟ್ಟು ಅಸಲು ಪೂರ್ಣವಾಗಿ ನೀಡಿದರೆ ಸಾಲ ಚುಕ್ತಾ ಆದಂತೆ. ಇಲ್ಲದಿದ್ದಲ್ಲಿ ಜಗಳ ಖಚಿತ. ಈ ಸಂಬಂಧ ಸಾಕಷ್ಟು ವಾಗ್ವಾದ, ಹೊಡೆದಾಟ ನಡೆದಿರುವುದುಂಟು ಎಂದು ರೈಲ್ವೆ ಇಲಾಖೆಯ ನೌಕರರೇ ತಿಳಿಸುವುದುಂಟು.ರೈಲ್ವೆ ಇಲಾಖೆಯಲ್ಲೂ ಕೆಲ ನೌಕರರಿದ್ದಾರೆ. ಅವರು ಸಹ ನೌಕರರಿಗೆ ಸಾಲ ಕೊಡುತ್ತಾರೆ. ಜತೆಗೆ ಬಡ್ಡಿ ಕುಳ ಮೂಲಕವೂ ಬೇರೆಯವರಿಗೆ ಸಾಲ ಕೊಡಿಸಲು ಮಧ್ಯಸ್ಥಿಕೆ ವಹಿಸುತ್ತಾರೆ. ಮುಂದೆ ಅಲ್ಲಿನ ಬಡ್ಡಿ ವ್ಯವಹಾರವನ್ನೆಲ್ಲ ಅವರೇ ನಿಭಾಯಿಸುತ್ತಾರೆ. ಹೀಗಾಗಿ ರೈಲ್ವೆ ಇಲಾಖೆಯಲ್ಲೇ ಬಡ್ಡಿ ವ್ಯವಹಾರಕ್ಕೆ ಕೆಲವರು ಏಜೆಂಟರಂತೆ ಕೆಲಸ ಮಾಡುವವರಿದ್ದಾರೆ ಎಂಬ ಮಾತು ಇಲಾಖೆಯ ಮೂಲಗಳಿಂದಲೇ ಕೇಳಿ ಬರುತ್ತದೆ.
ಇದು ಬರೀ ರೈಲ್ವೆ ಇಲಾಖೆಯ ನೌಕರರ ಕಥೆಯಷ್ಟೇ ಅಲ್ಲ. ಬೇರೆ ಬೇರೆ ರಾಜ್ಯ ಸರ್ಕಾರಿ, ಖಾಸಗಿ ಕಂಪನಿಗಳ ನೌಕರರ ಕಥೆಯೂ ಇದೇ ರೀತಿ ಆಗಿದೆ. ತಮ್ಮ ಅಡಚಣೆಗೆಂದು ಸಾಲ ಪಡೆದು ಬಡ್ಡಿ ಕುಳಗಳ ಕಿರುಕುಳಕ್ಕೆ ಸಾಕಪ್ಪ ಸಾಕು ಎನ್ನುವಂತೆ ಆಗುತ್ತದೆ ಎಂಬ ಮಾತು ಸಾಲ ಪಡೆದವರಿಂದಲೇ ಬರುತ್ತದೆ.ಒಟ್ಟಿನಲ್ಲಿ ಬಡ್ಡಿ ಕುಳಗಳ ಕೈ ಎಲ್ಲೆಡೆ ಹಬ್ಬಿರುವುದಂತೂ ಸತ್ಯ. ಪೊಲೀಸ್ ಇಲಾಖೆ ಅನಧಿಕೃತ ಬಡ್ಡಿ ಕುಳಗಳನ್ನು ಮಟ್ಟ ಹಾಕಬೇಕು ಎಂಬುದು ಪ್ರಜ್ಞಾವಂತರ ಅಂಬೋಣ.