ಕುಶಾಲನಗರ ಪಟ್ಟಣದ ಹೊಸ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಸತ್ಕಾರ್ಯ ಹೊಸ ಗೃಹ ಮಂಡಳಿ ಕ್ಷೇಮಾಭಿವೃದ್ಧಿ ಸಂಘದ ಮೂಲಕ 3.75 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಪುಸ್ತಕಗಳ ಸಂಗ್ರಹಾಲಯದ ಪುಸ್ತಕ ಗೂಡು ಭಾನುವಾರ ಲೋಕಾರ್ಪಣೆಗೊಂಡಿತು.

ಕುಶಾಲನಗರ: ಮಕ್ಕಳಿಗೆ ಪುಸ್ತಕಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ರಾಜಧಾನಿ ಎನಿಸಿದ ಕುಶಾಲನಗರ ಪಟ್ಟಣದಲ್ಲಿ ಕಳಶಪ್ರಾಯದಂತೆ ಈ ಹೊಸ ಬಡಾವಣೆಯಲ್ಲಿ ನಿವಾಸಿಗಳು ಆರಂಭಿಸಿರುವ ಪುಸ್ತಕ ಗೂಡು ಮುಂದಿನ ದಿನಗಳಲ್ಲಿ ಜೇನುಗೂಡು ಮಾದರಿಯಲ್ಲಿ ಯಶಸ್ವಿಯಾಗಿ ಬೆಳೆಯುವ ಮೂಲಕ ಮಕ್ಕಳು, ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಪುಸ್ತಕ ಓದುವ ಅಭಿರುಚಿ ಹೆಚ್ಚಿಸಲಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಬಡಾವಣೆಯ ನಿವಾಸಿಗಳು ಎಲ್ಲರೂ ಸೇರಿ ವಿನೂತನವಾಗಿ ಆರಂಭಿಸಿರುವ ಪುಸ್ತಕ ಗೂಡಿನ ನಿರ್ಮಾಣವು ಬಹಳ ಮಹತ್ಕಾರ್ಯವಾಗಿದೆ. ಪುಸ್ತಕ ಗೂಡಿನಿಂದ ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಮಾತನಾಡಿ, ಉದ್ಯಾನವನದಲ್ಲಿ ನಿರ್ಮಿಸಿರುವ ಪುಸ್ತಕ ಗೂಡಿನ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಹಾಗೂ ಬಡಾವಣೆಯ ಮೌಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಸೂಕ್ತ ಅನುದಾನ ಒದಗಿಸುವಂತೆ ಮನವಿ ಮಾಡಿದರು.

ಪುರಸಭೆಯ ನಾಮನಿರ್ದೇಶಿತ ಮಾಜಿ ಸದಸ್ಯ ಜಿ.ಬಿ.ಜಗದೀಶ್ ಮಾತನಾಡಿ, ಪುಸ್ತಕ ಗೂಡಿನಲ್ಲಿ ಸಂಗ್ರಹಿಸಿದ ಪುಸ್ತಕಗಳನ್ನು ಓಪ್ಪೋರಣವಾಗಿ ಜೋಡಿಸಲು ಪುಸ್ತಕದ ರಾಕ್ ಒದಗಿಸಲು 25 ಸಾವಿರ ರು. ಮೊತ್ತದ ಧನಸಹಾಯ ಮಾಡುವುದಾಗಿ ಪ್ರಕಟಿಸಿದರು.

ಪುರಸಭೆಯ ಮಾಜಿ ಸದಸ್ಯ ಎಂ.ಕೆ.ಸುಂದರೇಶ್ ಮಾತನಾಡಿ, ಮಳೆ–ಗಾಳಿಯಿಂದ ಪುಸ್ತಕಗಳಿಗೆ ರಕ್ಷಣೆ ನೀಡಲು ಪುಸ್ತಕ ಗೂಡಿನ ಕಟ್ಟಡದ ಸುತ್ತಲಿನ ಕಿಟಕಿಗಳಿಗೆ ರಕ್ಷಣೆ ಒದಗಿಸಲು ತಾವು ಆರ್ಥಿಕ ನೆರವು ಒದಗಿಸುವುದಾಗಿ ತಿಳಿಸಿದರು. ಪುಸ್ತಕದ ಗೂಡಿನ ಪರಿಕಲ್ಪನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಕೆ.ಜಿ.ರೇಣುಕಸ್ವಾಮಿ, ಪುಸ್ತಕ ಗೂಡಿನ ಮೂಲಕ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಮೊಬೈಲ್ ಬಳಕೆ ಬಿಟ್ಟು ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು. ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ ಉದಯಕುಮಾರ್, ಸಂಘದ ಉಪಾಧ್ಯಕ್ಷ ರುಕ್ಮಾಂಗದ, ಕಾರ್ಯದರ್ಶಿ ವಿಜೇತ ಪ್ರದೀಪ್, ನಿರ್ದೇಶಕರು ಇದ್ದರು. ಶಿಕ್ಷಕಿ ಎಂ.ತುಳಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ‌ ನಿರ್ದೇಶಕ ಎಸ್.ಎನ್.ಲೋಕೇಶ್ ಸ್ವಾಗತಿಸಿದರು. ಸಂಘದ‌ ನಿರ್ದೇಶಕ ಟಿ.ಬಿ.ಮಂಜುನಾಥ್ ವಂದಿಸಿದರು.