ಸಾರಾಂಶ
ಭಾವತೀವ್ರತೆ, ಮಾನವ ಸಂವೇದನೆಯಿಲ್ಲದಿದ್ದಲ್ಲಿ ಸಂವಹನ ಸಾಧ್ಯವಾಗದಿದ್ದಲ್ಲಿ ಸಿನೆಮಾಟೋಗ್ರಫಿ ಕೇವಲ ಪ್ರಯತ್ನವಾಗುತ್ತದೆ. ಜತೆಗೆ ಕಲೆ ಕುರಿತ ಅಭಿರುಚಿ, ಸುತ್ತಮುತ್ತಲಿನ ವಿಷಯಗಳ ಕುರಿತ ಆಸಕ್ತಿಯೂ ಮುಖ್ಯವಾಗುತ್ತದೆ ಎಂದು ಮಹೇನ್ ಸಿಂಹ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕಲೆಯ ಮೂಲ ಮೌಲ್ಯವನ್ನು ಅರ್ಥೈಸಿಕೊಳ್ಳುವ ಜತೆಗೆ ಭಾವತೀವ್ರತೆ ಹೊಂದಿ ಕತೆಗಾರನ ದೃಷ್ಟಿಯಲ್ಲಿ ಸಮಾಜವನ್ನು ನೋಡಿದಾಗ ಸಿನೆಮಾಟೋಗ್ರಫಿ ಯಶಸ್ವಿಯಾಗಬಲ್ಲದು ಎಂದು ಖ್ಯಾತ ಸಿನೆಮಾಟೋಗ್ರಾಫರ್ ಮಹೇನ್ ಸಿಂಹ ಅಭಿಪ್ರಾಯಪಟ್ಟರು.ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗವು ಇತ್ತೀಚೆಗೆ ಸಿನೆಮಾಟೋಗ್ರಫಿ ಕುರಿತು ಆಯೋಜಿಸಿದ್ದ ‘ಡಿಎಸ್ಎಲ್ಆರ್ ಮ್ಯಾಜಿಕ್: ಕ್ಯಾಪ್ಚರಿಂಗ್ ಸಿನೆಮಾ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಸಿನೆಮಾಟೊಗ್ರಾಫರ್’ನೊಳಗೆ ಕತೆಗಾರನಿರದಿದ್ದರೆ ಆತ ಯಶಸ್ವಿಯಾಗುವುದಿಲ್ಲ. ಭಾವತೀವ್ರತೆ, ಮಾನವ ಸಂವೇದನೆಯಿಲ್ಲದಿದ್ದಲ್ಲಿ ಸಂವಹನ ಸಾಧ್ಯವಾಗದಿದ್ದಲ್ಲಿ ಸಿನೆಮಾಟೋಗ್ರಫಿ ಕೇವಲ ಪ್ರಯತ್ನವಾಗುತ್ತದೆ. ಜತೆಗೆ ಕಲೆ ಕುರಿತ ಅಭಿರುಚಿ, ಸುತ್ತಮುತ್ತಲಿನ ವಿಷಯಗಳ ಕುರಿತ ಆಸಕ್ತಿಯೂ ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.ಸೃಜನಾತ್ಮಕ ಕ್ಷೇತ್ರದಲ್ಲಿ ಕಲಿಯುತ್ತಿರುವವರು ತಮ್ಮ ಕಲಿಕೆಯ ಮುಖ್ಯ ವಿಷಯದ ಹೊರತಾಗಿ ಇತರ ವಿಷಯಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳದಿದ್ದರೆ ಕ್ಷೇತ್ರದಲ್ಲಿ ತಮ್ಮ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲಾಗುವುದಿಲ್ಲ. ಮಾಧ್ಯಮದ ಮೂಲಕ ಆತ್ಮವನ್ನು ಅಭಿವ್ಯಕ್ತಗೊಳಿಸುವುದೇ ಕಲೆಯಾಗಿದ್ದು, ಅಂತಹ ಕಲೆಗಳಾದ ಚಿತ್ರಕಲೆ, ಪ್ರದರ್ಶಕ ಕಲೆಗಳು, ರಂಗಭೂಮಿ, ಸಾಹಿತ್ಯ, ಸಂಗೀತ ಇತ್ಯಾದಿ ಮಾಧ್ಯಮಗಳ ಅಭಿರುಚಿ ಹೊಂದುವುದು, ಅರ್ಥೈಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.
ಕತೆ, ನಟನೆ, ಬಣ್ಣ (ಕಲರ್ ಸ್ಕೀಂ), ಬೆಳಕು, ಹಿನ್ನೆಲೆ ಸಂಗೀತ, ಕತೆ ಪ್ರಸ್ತುತಿ ಇತ್ಯಾದಿ ಹಲವು ಅಂಶಗಳ ಹದವಾದ ಮಿಶ್ರಣದಿಂದ ಉತ್ತಮ ಚಿತ್ರ ತಯಾರಾಗುತ್ತದೆ. ಸಿನೆಮಾಟೋಗ್ರಫರ್ ಸ್ವತಃ ಕತೆಯ ಬಗ್ಗೆ ಚಿತ್ರಣ ಹೊಂದಿದ್ದು, ನಿರ್ದೇಶಕನೊಂದಿಗೆ ಸಮನ್ವಯದೊಂದಿಗೆ ಸಂವಹನ ನಡೆಸುತ್ತ ಕೆಲಸ ಮಾಡಿದಲ್ಲಿ ಚಿತ್ರ ನಿರ್ಮಾಣ ಯಶಸ್ವಿಯಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಎಸ್.ಡಿ.ಎಂ. ಮಲ್ಟಿಮೀಡಿಯಾ ಸ್ಟುಡಿಯೋದ ವಿಡಿಯೋ ಪ್ರೊಡಕ್ಷನ್ಸ್ ಡೈರೆಕ್ಟರ್ ರಕ್ಷಿತ್ ರೈ ಉಪಸ್ಥಿತರಿದ್ದರು.