ಸಾರಾಂಶ
ತಯಾರಿಸಿರುವ ಬಟ್ಟೆಯನ್ನು ಆನ್‌ಲೈನ್ ಮೂಲಕ ಕೂಡ ವ್ಯಾಪಾರ ಮಾಡಿ ಉದ್ಯೋಗ ಅಭಿವೃದ್ಧಿಗೊಳಿಸಬಹುದು
ಗದಗ: ಸ್ವ ಉದ್ಯೋಗ ಮಾಡಲು ಮೊದಲು ಮನಸ್ಸು ಹಾಗೂ ಆಸಕ್ತಿ ಇರಬೇಕು ಅಂದರೆ ಮಾತ್ರ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ.ಎ ಹೇಳಿದರು.
ನಗರದ ಪಂಚಾಕ್ಷರಿ ವಲಯದ ಪಂಚಾಕ್ಷರಿ ಕಾರ್ಯ ಕ್ಷೇತ್ರದಲ್ಲಿ ಧರ್ಮ ಜ್ಯೋತಿ ಜ್ಞಾನವಿಕಾಸ ಹಾಗೂ ಶ್ರೀ ಸಾಯಿಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ನಡೆದ 3 ತಿಂಗಳ ಉಚಿತ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ತರಬೇತಿದಾರರು ಸ್ವ ಉದ್ಯೋಗ ಮಾಡಿ ಸ್ವಾವಲಂಭಿ ಜೀವನ ರೂಪಿಸಿಕೊಳ್ಳಬೇಕು. ತಾವು ತಯಾರಿಸಿರುವ ಬಟ್ಟೆಯನ್ನು ಆನ್‌ಲೈನ್ ಮೂಲಕ ಕೂಡ ವ್ಯಾಪಾರ ಮಾಡಿ ಉದ್ಯೋಗ ಅಭಿವೃದ್ಧಿಗೊಳಿಸಬಹುದು. ಅದರ ಜತೆಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಟೆಲ್‌ರಿಂಗ್ ಮಷೀನ್ ಖರೀದಿ ಮಾಡಲು ನಮ್ಮಲ್ಲಿ ಪ್ರಗತಿ ನಿಧಿ ಪಡೆದುಕೊಂಡು ಉದ್ಯೋಗ ಮಾಡಬಹುದು ಎಂದರು.ವಕೀಲ ಬಸವರಾಜ ಮಹಿಳೆಯರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ನಾಯಕ, ಪಂಚಾಕ್ಷರಿ ವಲಯದ ಅಧ್ಯಕ್ಷೆ ವಾಣಿಶ್ರೀ ಸೋಲಾಪಟ್ಟಿ, ಪ್ರೇಮಾ ಕಡೇಮನಿ, ಗಂಗಮ್ಮ, ಸುಜಾತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.