ಕೃಷಿ ಮೇಳದಲ್ಲಿ ಕುತೂಹಲಕಾರಿ ಕೀಟ ಪ್ರಪಂಚ!

| Published : Sep 24 2024, 01:45 AM IST / Updated: Sep 24 2024, 01:46 AM IST

ಸಾರಾಂಶ

ಕಳೆದ ವರ್ಷ ಹಲವು ಜಾತಿಯ ಕೀಟಗಳನ್ನು ಬಳಸಿ ಚಿಟ್ಟೆಸ್ವಾಮಿ ಕ್ರೀಡಾಂಗಣದ ಹೆಸರಿನಲ್ಲಿ ಕ್ರಿಕೆಟ್‌ ಕ್ರೀಡಾಂಗಣ ಸೃಷ್ಟಿ, ಕೀಟ ಸರ್ಕಸ್‌ ಮಾಡುವುದು ವಿಶೇಷವಾಗಿತ್ತು. ಆದರೆ, ಈ ಬಾರಿ ಚಿಟ್ಟೆಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಾದರಿ ಗಮನ ಸೆಳೆಯುತ್ತಿದ್ದು ಚಿಟ್ಟೆ ಚಿಕಿತ್ಸಾಲಯ ಎಂದು ಹೆಸರಿಡಲಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

25 ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆದುಕೊಂಡು ಬರುತ್ತಿರುವ ಇಲ್ಲಿಯ ಕೃಷಿ ಮೇಳದಲ್ಲಿ ರೈತರು ಹಾಗೂ ಜನರನ್ನು ಆಕರ್ಷಿಸುವ ಹತ್ತಾರು ಸಂಗತಿಗಳನ್ನು ಗುರುತಿಸಬಹುದು. ಆದರೆ, ಮೇಳಕ್ಕೆ ಕಳೆದ ವರ್ಷದಿಂದ ಹೊಸ ಪರಿಚಯವಾಗಿರುವ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಈ ವರ್ಷವೂ ಇತ್ತು.

ನಿತ್ಯ ನಮ್ಮೆದುರಿಗೆ ಇರುವ ಹತ್ತಾರು, ಸಾವಿರಾರು ಕೀಟಗಳ ಬಗ್ಗೆ ಕುತೂಹಲಕಾರಿ, ಅಪೂರ್ವ ಸಂಗತಿಗಳನ್ನು ಒಳಗೊಂಡು ಅವುಗಳ ಜೀವಶಾಸ್ತ್ರ, ಸಂತೋನೋತ್ಪತ್ತಿ ಹಾಗೂ ಮಾನವನ ಜೊತೆಗಿನ ಸಂಬಂಧವನ್ನು ಈ ಪ್ರದರ್ಶನದಲ್ಲಿ ತೋರ್ಪಡಿಸಲಾಗಿದ್ದು, ಜನಾಕರ್ಷಣೆಗೆ ಒಳಗಾಗಿದೆ. ಕೃಷಿ ವಿವಿ ಕೀಟಶಾಸ್ತ್ರ ವಿಭಾಗವು ಈ ಕೀಟ ಪ್ರಪಂಚವನ್ನು ಸೃಷ್ಟಿ ಮಾಡಿದ್ದು, ನಾವು ನಿತ್ಯ ಗಮನಿಸುವ ಪಾತರಗಿತ್ತಿ, ದುಂಬಿ, ಜೇನುನೊಣ, ಇರುವೆ, ಮಿಡತೆ, ಕುಂಬಾರ ಹುಳು, ಶಿವನ ಕುದುರೆ, ರೇಷ್ಮೆ ಹುಳು ಅಂತಹ ಹಲವು ಕೀಟಗಳನ್ನು ಬಳಸಿಕೊಂಡು ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಫಲಪುಷ್ಪ ಪ್ರದರ್ಶನದ ಬಳಿ ಕೀಟ ಪ್ರಪಂಚವನ್ನು ಸೃಷ್ಟಿಸಲಾಗಿದೆ. ಮಕ್ಕಳಂತೂ ತರಹೇವಾರಿ ಜೀವಂತ ಕೀಟಗಳನ್ನು ವೀಕ್ಷಿಸಿ ಅಚ್ಚರಿ ಪಡುತ್ತಿದ್ದಾರೆ.

ಈ ಬಾರಿ ವಿಶೇಷತೆಗಳು:

ಕಳೆದ ವರ್ಷ ಹಲವು ಜಾತಿಯ ಕೀಟಗಳನ್ನು ಬಳಸಿ ಚಿಟ್ಟೆಸ್ವಾಮಿ ಕ್ರೀಡಾಂಗಣದ ಹೆಸರಿನಲ್ಲಿ ಕ್ರಿಕೆಟ್‌ ಕ್ರೀಡಾಂಗಣ ಸೃಷ್ಟಿ, ಕೀಟ ಸರ್ಕಸ್‌ ಮಾಡುವುದು ವಿಶೇಷವಾಗಿತ್ತು. ಆದರೆ, ಈ ಬಾರಿ ಚಿಟ್ಟೆಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಾದರಿ ಗಮನ ಸೆಳೆಯುತ್ತಿದ್ದು ಚಿಟ್ಟೆ ಚಿಕಿತ್ಸಾಲಯ ಎಂದು ಹೆಸರಿಡಲಾಗಿದೆ. ಜೊತೆಗೆ ಕೀಟಗಳನ್ನು ಬಳಸಿ ಗೊಬ್ಬರ ತಯಾರಿಕೆ ಗಮನ ಸೆಳೆಯಿತು. ನಿತ್ಯ ಮನೆಯಲ್ಲಿ ತ್ಯಾಜ್ಯವಾಗುವ ವಸ್ತುಗಳಿಗೆ ಬ್ಲಾಕ್‌ ಸೋಜರ್‌ ಹುಳುವನ್ನು ಬಿಟ್ಟರೆ ಬರೀ 20 ದಿನಗಳಲ್ಲಿ ತ್ಯಾಜ್ಯವು ಗೊಬ್ಬರವಾಗಿ ಪರಿವರ್ತನೆಯಾಗಲಿದೆ ಎಂದು ಮಾಹಿತಿ ನೀಡಿದ ಕೀಟ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್‌.ಜಿ. ರಾಯರ್‌, ಕೃಷಿ ವಿವಿ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೇಸ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ತಿರುವನಂತಪುರದ ಸಹಯೋಗದಲ್ಲಿ ಇಸ್ರೋದ ಗಗನಯಾನ ಮಿಷನ್‌ನಲ್ಲಿ ಬಾಹ್ಯಾಕಾಶದಲ್ಲಿ ಮೂತ್ರಪಿಂಡದ ಕಲ್ಲಿನ ರಚನೆ ಅಧ್ಯಯನ ಮಾಡಲು ಹೆಣ್ಣು ನೊಣಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿರುವ ಕುರಿತಾಗಿಯೂ ಕೀಟ ಪ್ರಪಂಚದಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೀಟಾ ಆಹಾರ:

ಸಾಮಾನ್ಯವಾಗಿ ಕೀಟಗಳನ್ನು ನೋಡಿದರೆ ಯಾರಿಗಾದರೂ ಭಯ ಆಗುತ್ತದೆ. ಆದರೆ, ಕೀಟಗಳಲ್ಲಿ ಸಾಕಷ್ಟು ಪೌಷ್ಟಿಕಾಂಶ ಇರುವ ಹಿನ್ನೆಲೆಯಲ್ಲಿ ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕೀಟಗಳೇ ಅವರ ಪ್ರಮುಖ ಆಹಾರ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಕೀಟ ಆಹಾರ ಪದ್ಧತಿ ಶುರುವಾಗಿದ್ದು, ಈ ಕೀಟ ಪ್ರಪಂಚದಲ್ಲಿ ಕೀಟಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಜನರನ್ನು ಬಾಯಿ ಮೇಲೆ ಕೈ ಇಡುವಂತೆ ಮಾಡಿದವು. ರೇಷ್ಮೆ ಹುಳುವಿನ ಡ್ರೈ ಚಿಲ್ಲಿ, ರೇಷ್ಮೆ ಹುಳುಗಳ ಸೂಪ್, ಕೆಂಪು ಇರುವೆಗಳ ಪ್ರೈ, ಮಿಡತೆ ಕೀಟದ ಡ್ರೈ, ಶಿವನಕುದುರೆಯ ತಂದೂರಿ ಹಾಗೂ ಕಪ್ಪು ಸೈನಿಕ ನೋಣದ ಮಸಾಲಾ ಹಾಗೂ ಈ ಬಾರಿ ಹೊಸದಾಗಿ ಮಿಡತೆ ಬರ್ಗರ್‌ ಮಾಡಿದ್ದು ಮೈ ಜುಮ್ಮೆನ್ನಿಸಿತು. ಮನುಷ್ಯ, ಪ್ರಾಣಿ-ಪಕ್ಷಿಗಳ ಪ್ರಪಂಚದ ರೀತಿಯಲ್ಲಿಯೇ ಕೀಟಗಳದ್ದೇ ಒಂದು ಅದ್ಭುತ ಪ್ರಪಂಚವಿದೆ. ಕೀಟಗಳು 400 ದಶಲಕ್ಷ ವರ್ಷಗಳಿಂದ ಜೀವಿಸುತ್ತಿವೆ. ಕೃಷಿಗೆ ಕೀಟಗಳು ಸಹ ಪೂರಕವಾಗಿದ್ದು, ಈ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಕೃಷಿ ಮೇಳದಲ್ಲಿ ಕೀಟಗಳ ವೈವೈಧ್ಯತೆಯ ಪ್ರದರ್ಶನ ಹಾಗೂ ಮಾಹಿತಿ ನೀಡಲಾಗುತ್ತಿದ್ದು, ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್‌.ಜಿ. ರಾಯರ್‌ ಹೇಳಿದರು.