ರಾಜ್ಯ ಸಹಕಾರ ಸಂಘಗಳ ಕಾಯ್ದೆಯಡಿ ಪಂಚಮಸಾಲಿ ಟ್ರಸ್ಟ್ ನೋಂದಣಿಯಾಗಿದ್ದು, ಟ್ರಸ್ಟ್‌ಗೆ ಪಂಚಮಸಾಲಿ ಸಂಘದ ಸಲಹೆ ಕೊಡಬಹುದೇ ಹೊರತು ಟ್ರಸ್ಟ್‌ ಬಗ್ಗೆ ಮಾತನಾಡುವ, ಟ್ರಸ್ಟಿಗಳನ್ನು ಉಚ್ಚಾಟಿಸುವ, ಟ್ರಸ್ಟ್ ಬಗ್ಗೆ ಕ್ರಮ ಕೈಗೊಳ್ಳುವ ಯಾವುದೇ ಅಧಿಕಾರ ಸಂಘಕ್ಕೆ ಇಲ್ಲ ಎಂದು ಹರಿಹರ ಪಂಚಮಸಾಲಿ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಪಾಟೀಲಗೆ ತಿರುಗೇಟು ನೀಡಿದ್ದಾರೆ.

- ಪೀಠದ ಟ್ರಸ್ಟಿಗಳೇ ರಾಜೀನಾಮೆ ನೀಡ್ಬೇಕು ಅಥವಾ ಮೃತಪಟ್ಟರಷ್ಟೇ ಬದಲಾವಣೆ ಸಾಧ್ಯ: ಬಿ.ಸಿ.ಉಮಾಪತಿ ತಿರುಗೇಟು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸಹಕಾರ ಸಂಘಗಳ ಕಾಯ್ದೆಯಡಿ ಪಂಚಮಸಾಲಿ ಟ್ರಸ್ಟ್ ನೋಂದಣಿಯಾಗಿದ್ದು, ಟ್ರಸ್ಟ್‌ಗೆ ಪಂಚಮಸಾಲಿ ಸಂಘದ ಸಲಹೆ ಕೊಡಬಹುದೇ ಹೊರತು ಟ್ರಸ್ಟ್‌ ಬಗ್ಗೆ ಮಾತನಾಡುವ, ಟ್ರಸ್ಟಿಗಳನ್ನು ಉಚ್ಚಾಟಿಸುವ, ಟ್ರಸ್ಟ್ ಬಗ್ಗೆ ಕ್ರಮ ಕೈಗೊಳ್ಳುವ ಯಾವುದೇ ಅಧಿಕಾರ ಸಂಘಕ್ಕೆ ಇಲ್ಲ ಎಂದು ಹರಿಹರ ಪಂಚಮಸಾಲಿ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಪಾಟೀಲಗೆ ತಿರುಗೇಟು ನೀಡಿದ್ದಾರೆ.

ಹರಿಹರ ಪಂಚಮಸಾಲಿ ಪೀಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರಿ ಸಂಘಗಳ ಕಾಯ್ದೆಯಡಿ ಟ್ರಸ್ಟ್ ನೋಂದಣಿಯಾಗಿದೆ. ನಮ್ಮದು ಚಾರಿಟಬಲ್ ಟ್ರಸ್ಟ್ ಆಗಿದ್ದು, 2008ರಿಂದ 2026ರವರೆಗಿನ ಎಲ್ಲ ದಾಖಲೆ ಇದ್ದು, ಸಮಾಜದ ಮುಂದೆಯೇ, ಉಚ್ಚಾಟಿತ ಸ್ವಾಮೀಜಿ, ಲೆಕ್ಕ ಕೇಳಿದವರ ಸಮಕ್ಷಮದಲ್ಲಿ ಟ್ರಸ್ಟ್ ಎಲ್ಲಾ ಲೆಕ್ಕವನ್ನೂ ನೀಡಲಿದೆ ಎಂದರು.

ಪೀಠಕ್ಕೆ 11 ಜನ ಲೈಫ್ ಟ್ರಸ್ಟಿ ಇದ್ದೆವು. ಈಗ ನಾಲ್ವರು ಇಲ್ಲ, 7 ಜನ ಲೈಫ್‌ ಟ್ರಸ್ಟಿಗಳಿದ್ದೇವೆ. ನಾವು ಟ್ರಸ್ಟ್‌ಗೆ ರಾಜೀನಾಮೆ ನೀಡಬೇಕು ಅಥವಾ ಸಾವನ್ನಪ್ಪಿದಾಗ ಮಾತ್ರವೇ ಬದಲಾವಣೆ ಸಾಧ್ಯ. 7 ಜನ ಲೈಫ್ ಟ್ರಸ್ಟಿಗಳು, 8 ಜನರನ್ನು ಟ್ರಸ್ಟಿ ಮಾಡಿಕೊಂಡಿದ್ದೇವೆ. ಅದರಲ್ಲಿ ಇಬ್ಬರ ಅವಧಿ ಇದೇ ಆಗಸ್ಟ್‌ಗೆ ಪೂರ್ಣಗೊಳ್ಳಲಿದೆ. ನಾಳೆ ನಾವು ಲೆಕ್ಕ ಕೊಡುತ್ತೇವೆ. ಯಾವ ರೀತಿಯಲ್ಲಿ ಲೆಕ್ಕ ಕೊಡುತ್ತೇವೆ ನೋಡಿ. ನಾಳೆ ದಿವಸ ನಾವು ಎಲ್ಲ ಲೆಕ್ಕ ಕೊಡಲಿದ್ದು, ದಯವಿಟ್ಟು ಬನ್ನಿ ಎಂದು ಅವರು ಕರೆ ನೀಡಿದರು.

ಸಮಾಜದ ರಾಜ್ಯ ಮುಖಂಡರು ಸೇರಿ, ಟ್ರಸ್ಟ್‌ಗೆ ಸದಸ್ಯರ ಆಯ್ಕೆ ಮಾಡಿದ್ದೇವೆ. ನಾವು ಸಮಸ್ತ ಪಂಚಮಸಾಲಿ ಸಮಾಜದ ಪ್ರತಿನಿಧಿಗಳು. ಇದು ಹಿಂದಿನಿಂದ ನಡೆದು ಬಂದಿತ್ತು. ನಾಲ್ಕು ಗೋಡೆ ಮಧ್ಯೆ ಇದನ್ನೆಲ್ಲಾ ಚರ್ಚೆ ಮಾಡಿದ್ದೀವಿ. ನವೆಂಬರ್ ತಿಂಗಳಲ್ಲಿ ಸಭೆ ಕರೆದಾಗ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ಡಿಸೆಂಬರ್‌ನಲ್ಲಿ ಹರ ಜಾತ್ರೆಯೆಂದು ಹೇಳಿ, ಮುಂದೆ ಹಾಕಿದ್ದರು. ಜನವರಿಯಲ್ಲಿ ಹರಜಾತ್ರೆ ಬಗ್ಗೆ ಸಭೆ ಕರೆದಾಗ ಮಠದಲ್ಲಿ ದುಡ್ಡು ಇಲ್ಲ. ಸರಳವಾಗಿ ಆಚರಿಸುವಂತೆ ಹೇಳಿದೆವು. ನಾನು ₹1 ಲಕ್ಷ, ಬೇರೆಯವರೆಲ್ಲಾ ಸೇರಿ ನಾಲ್ಕೂವರೆ ಲಕ್ಷ ರು. ಕೊಟ್ಟಿದ್ದೆವು. ಆದರೆ, ಹರಜಾತ್ರೆ ಪಂಚಮಸಾಲಿ ಜಾತ್ರೆಯಾಗದೇ, ರಾಜಕೀಯ ಆಯ್ತು ಎಂದು ಅವರು ಟೀಕಿಸಿದರು.

ಹರ ಜಾತ್ರೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಬಂದಿದ್ದರೆಂಬ ಕಾರಣಕ್ಕೆ ನಾನು ಭಾಗಿಯಾಗಿದ್ದೆ. ಅದೇ ಜಾತ್ರೆಯಲ್ಲಿ ಒಬ್ಬರಿಗೊಬ್ಬರನ್ನು ಎತ್ತಿ ಕಟ್ಟುವ ಕೆಲಸವೂ ಆಯಿತು. ಹರ ಜಾತ್ರೆಯ ಲೆಕ್ಕ ಕೇಳುವುದಕ್ಕೆ ನೀವು ಸಂಬಂಧವೇ ಇಲ್ಲವೆಂದು ಹೇಳಿದರು. ಸ್ವಾಮೀಜಿಗೆ ತಮ್ಮ ನಡವಳಿಕೆ ತಿದ್ದಿಕೊಳ್ಳಲು ಸಾಕಷ್ಟು ಅವಕಾಶ ನೀಡಿದೆವು. ಆದರೆ, ಸ್ವಾಮೀಜಿ ವರ್ತನೆ ಎಲ್ಲರೂ ಸಹ ಗಮನಿಸಿದ್ದೀರಿ. ಏ.27ರಂದು ಪೀಠದಲ್ಲಿ 2008ರಿಂದ 2026 ರವರೆಗಿನ ಪೈಸೆ ಪೈಸೆಯ ಲೆಕ್ಕ ಕೊಡುತ್ತೇವೆ. ಸಮಾಜದ ರಾಜ್ಯಾಧ್ಯಕ್ಷರು, ಜಿಲ್ಲಾ, ತಾಲೂಕು ಅಧ್ಯಕ್ಷರಿಗೂ ಆಹ್ವಾನಿಸಿದ್ದೇವೆ. ಪದಚ್ಯುತ ಸ್ವಾಮೀಜಿಗೂ ನಾಳೆ ಲೆಕ್ಕ ಕೊಡುವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಯಾರು ಲೆಕ್ಕ ಕೊಡಿ ಅಂದಿದ್ದರೋ ಆ ಎಲ್ಲರನ್ನೂ ಆಹ್ವಾನಿಸಿದ್ದೇವೆ. ಸೋಮವಾರ ಮಠಕ್ಕೆ ಬಂದು, ದೇಣಿಗೆ ಹಾಗೂ ಅನುದಾನದ ಎಲ್ಲ ಲೆಕ್ಕವನ್ನೂ ಕೊಡುತ್ತೇವೆ. ಪದಚ್ಯುತ ಸ್ವಾಮೀಜಿಯವರನ್ನು ತಿದ್ದಲು ಪ್ರಯತ್ನಿಸಿ, ಟ್ರಸ್ಟಿಗಳ ಸಭೆಯ ಕರೆದರೂ ಸ್ವಾಮೀಜಿ ಒಳಗೆ ಹೋಗಿ ಬಾಗಿಲು ಹಾಕಿಕೊಂಡು, ಕುಳಿತರು. ಮಾ.10ಕ್ಕೆ ಸಭೆ ಕರೆದು, ಶ್ರೀಗಳ ಆಚಾರ ವಿಚಾರದ ಬಗ್ಗೆ ವಿಷಯ ಮುಂದಿಟ್ಟಿದ್ದೆವು. ಸಮಾಜದ ಪರಂಪರೆ, ಆಚಾರ, ವಿಚಾರದ ವಿಷಯ ತೆಗೆದು ಹಾಕುವಂತೆ ಆಡಳಿತಾಧಿಕಾರಿ ಹೇಳಿದರು. ಆಗ ಟ್ರಸ್ಟ್ ಅದನ್ನು ತೆಗೆಯಲಿಲ್ಲ. ಈ ಹಿಂದೆ ಏನು ಮಾಡಿದ್ದಿರಿ, ಅದನ್ನು ಬಿಟ್ಟು ಬಿಡಿ ಅಂತಾ ಹೇಳಿದರೂ ಸ್ವಾಮೀಜಿ ಕೇಳಲಿಲ್ಲ ಎಂದು ಬಿ.ಸಿ. ಉಮಾಪತಿ ದೂರಿದರು.

ಟ್ರಸ್ಟ್‌ನ ಕಾರ್ಯದರ್ಶಿ ಜ್ಯೋತಿ ಪ್ರಕಾಶ, ಟ್ರಸ್ಟಿ ಚಂದ್ರಶೇಖರ ಪೂಜಾರ, ವಿಶೇಷ ಆಹ್ವಾನಿತ ಎಚ್.ಎಸ್.ನಾಗರಾಜ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಪಟ್ಟಣಶೆಟ್ಟಿ, ಕಾನೂನು ಸಲಹೆಗಾರ ಸೋಮಶೇಖರ ಕೊತ್ತಂಬರಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತ ಹುಲ್ಲತ್ತಿ, ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ್ ಬಿಸರಳ್ಳಿ, ಹರಿಹರದ ಶೇಖರಪ್ಪ ಗುಡದಹಳ್ಳಿ, ವಿವಿಧ ಜಿಲ್ಲೆಗಳ ಬಸವನಗೌಡ್ರು, ಎಂ.ಎಸ್.ರುದ್ರೇಶ, ಪಾಟೀಲ ಬ್ಯಾಡಗಿ ಇತರರು ಇದ್ದರು.

- - -

(ಕೋಟ್ಸ್‌) ಪಂಚಮಸಾಲಿ ಪೀಠ ಅಥವಾ ಶ್ವಾಸ ಸಂಸ್ಥೆ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಅಂತಾ ಹೇಳಿದ್ದೆವು. ಮಾ.24ರ ಒಳಗಾಗಿ ತಿಳಿಸುವುದಾಗಿ ಸ್ವಾಮೀಜಿ ಹೇಳಿದರೂ ಸ್ವಾಮೀಜಿ ತಮ್ಮ ನಿಲುವನ್ನು ಹೇಳಲಿಲ್ಲ. ಟ್ರಸ್ಟ್‌ನ ಲೆಕ್ಕಕ್ಕೂ ಹಾಗೂ ಸ್ವಾಮೀಜಿ ಉಚ್ಛಾಟನೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ವಿಷಯಾಂತರ ಮಾಡುವ ಉದ್ದೇಶದಿಂದಲೇ ಲೆಕ್ಕದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಕರೆದು, ಲೆಕ್ಕ ನೀಡಿದ್ದೆವು. ಕೆಲವರು ಹೇಳಿದ ಹಾಗೆ ನಡೆದುಕೊಳ್ಳಲಿಲ್ಲ. ಮಾ.24ರಂದು ಲೆಕ್ಕ ಕೊಡಿ ಚಳವಳಿ ಇಟ್ಟುಕೊಂಡರು. - ಬಿ.ಸಿ.ಉಮಾಪತಿ, ಪ್ರಧಾನ ಧರ್ಮದರ್ಶಿ, ಹರಿಹರ ಪಂಚಮಸಾಲಿ ಪೀಠ.

- - - ಟ್ರಸ್ಟಿಗಳನ್ನು ಉಚ್ಚಾಟಿಸುವ ಅಧಿಕಾರ ಪಂಚಮಸಾಲಿ ಸಂಘಕ್ಕೆ ಇಲ್ಲ. ಟ್ರಸ್ಟ್ ಬೈಲಾನೇ ಬೇರೆ, ಸಂಘದ ಬೈಲಾವೇ ಬೇರೆಯಾಗಿವೆ. ಸಂಘವನ್ನು ಯಾವ ರೀತಿ ಮುಂದುವರಿಸಬೇಕು ಅಂತಾ ಸಂಘಕ್ಕೆ ಬೈಲಾ ಮಾಡಿದ್ದೀವಿ. ಟ್ರಸ್ಟಿಗಳನ್ನು ತೆಗೆಯುವ ಹಕ್ಕು ಸಂಘದವರಿಗಾಗಲೀ, ಬೇರೆ ಯಾರಿಗೇ ಆಗಲಿ ಇಲ್ಲ. ಯಾರೇ ಆಗಿರಲಿ, ಸುಳ್ಳು ಹೇಳಿ, ಸಮಾಜದ ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು. ಸಂಘದ ರಾಜ್ಯಾಧ್ಯಕ್ಷರೂ ಸಹ ಇಂತಹ ಕೆಲಸ ಮಾಡಬಾರದು.

- ಪರಮೇಶ್ವರ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ,

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ. - - -

-26ಕೆಡಿವಿಜಿ2, 3: ಹರಿಹರ ಪಂಚಮಸಾಲಿ ಪೀಠದಲ್ಲಿ ಭಾನುವಾರ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.