ರಾಜ್ಯದಲ್ಲೇ ಜಿಲ್ಲೆಗೆ ಹೆಚ್ಚು ಬೆಳೆವಿಮೆ ಮಧ್ಯಂತರ ಪರಿಹಾರ

| Published : Nov 08 2023, 01:00 AM IST / Updated: Nov 08 2023, 01:01 AM IST

ರಾಜ್ಯದಲ್ಲೇ ಜಿಲ್ಲೆಗೆ ಹೆಚ್ಚು ಬೆಳೆವಿಮೆ ಮಧ್ಯಂತರ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಗೆ ₹೧೨೬.೭೫ ಮೊತ್ತದ ಅಧಿಕ ಮಧ್ಯಂತರ ಬೆಳೆ ವಿಮೆ ಪರಿಹಾರ ಹಣ ಬಂದಿದೆ. ಜಿಲ್ಲಾಧಿಕಾರಿ ಒಳಗೊಂಡಂತೆ ಕೃಷಿ, ತೋಟಗಾರಿಕೆ ಅಧಿಕಾರಿಗಳು ಹಾಗೂ ರೈತರ ಸಹಕಾರದಿಂದ ರಾಜ್ಯದಲ್ಲೇ ಜಿಲ್ಲೆಗೆ ಅಧಿಕ ಮೊತ್ತದ ಮಧ್ಯಂತರ ಬೆಳೆ ವಿಮೆ ಬಂದಿದೆ ಎಂದು ಜವಳಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಸಚಿವ ಶಿವಾನಂದ ಪಾಟೀಲ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಗೆ ₹೧೨೬.೭೫ ಮೊತ್ತದ ಅಧಿಕ ಮಧ್ಯಂತರ ಬೆಳೆ ವಿಮೆ ಪರಿಹಾರ ಹಣ ಬಂದಿದೆ. ಜಿಲ್ಲಾಧಿಕಾರಿ ಒಳಗೊಂಡಂತೆ ಕೃಷಿ, ತೋಟಗಾರಿಕೆ ಅಧಿಕಾರಿಗಳು ಹಾಗೂ ರೈತರ ಸಹಕಾರದಿಂದ ರಾಜ್ಯದಲ್ಲೇ ಜಿಲ್ಲೆಗೆ ಅಧಿಕ ಮೊತ್ತದ ಮಧ್ಯಂತರ ಬೆಳೆ ವಿಮೆ ಬಂದಿದೆ ಎಂದು ಜವಳಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಧ್ಯಂತರ ಬೆಳೆವಿಮೆ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ ₹೪೦ ಕೋಟಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಉಳಿದಂತೆ ರೈತರಿಗೆ ಹಂತ ಹಂತವಾಗಿ ಹಣ ಜಮೆ ಮಾಡಲಾಗುವುದು. ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿರುವುದರಿಂದ ರೈತರಿಗೆ ಸ್ವಲ್ಪ ತೃಪ್ತಿಯಾಗಿರುವುದಾಗಿ ಭಾವಿಸುತ್ತೇನೆ ಎಂದರು.

ಕೇಂದ್ರ ಸ್ಪಂದಿಸುತ್ತಿಲ್ಲ:

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನುಸಾರ ರೈತರಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಕೇಂದ್ರ ಅನುದಾನ ಬಿಡುಗಡೆ ಮಾಡಿದ ತಕ್ಷಣ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಎಲ್ಲ ವಿಚಾರದಲ್ಲೂ ವಿಳಂಬ ಮಾಡುತ್ತಿದೆ. ೯ ತಿಂಗಳ ಕಳೆದರು ಬೆಳೆ ಸಾಲ ನೀಡಲು ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ. ನಬಾರ್ಡ್‌ಗೆ ₹೪,೫೦೦ ಕೋಟಿ ಹಣ ನೀಡಬೇಕು. ನಬಾರ್ಡ್‌ನಿಂದ ಕೆಸಿಸಿ ಬ್ಯಾಂಕ್‌ಗಳಿಗೆ ಹಣ ಬಂದರೆ ಬೆಳೆಸಾಲ ನೀಡಬಹುದು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಬರುತ್ತಿಲ್ಲ. ಆದರೆ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರಕ್ಕೆ ಜಿಎಸ್‌ಟಿ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬೇಸಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿಗಳ ಪರಿಶೀಲನೆಗೆ ಇಂದು ಸಭೆ ಆಯೋಜಿಸಲಾಗಿದೆ. ನಿನ್ನೆ ಜಿಲ್ಲೆಯಲ್ಲಿ ಸ್ವಲ್ಪ ಮಳೆಯಾಗಿರುವುದರಿಂದ ಹಿಂಗಾರಿ ಬಿತ್ತನೆಗೆ ರೈತರಿಗೆ ಪ್ರೋತ್ಸಾಹ ನೀಡಲಾಗುವುದು ಹಾಗೂ ಬೀಜ-ಗೊಬ್ಬರದ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯ ಹತ್ತು ಪಟ್ಟಣಗಳಿಗೆ ನೀರಿನ ಸಮಸ್ಯೆ ಇದೆ. ಇದು ಬಹಳ ದಿನದ ಸಮಸ್ಯೆಯಾಗಿದೆ. ಬರುವ ದಿನಗಳಲ್ಲಿ ಈ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಕಂದಾಯ ಸಚಿವರು ಜಿಲ್ಲೆಗೆ ಆಗಮಿಸಿ ಸಭೆ ನಡೆಸಿ ಅನೇಕ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.