ಸಾರಾಂಶ
ರಕ್ತದಾನ ಮಾಡುವವರು ಈ ರೀತಿ ಮಾನವೀಯತೆ ಮೆರೆಯುತ್ತಾರೆ. ಹಳೆಯ ವಿದ್ಯಾರ್ಥಿಗಳು ಬಂದು ರಕ್ತದಾನ ಮಾಡುತ್ತಿರುವುದು ಹೆಮ್ಮೆಯ ವಿಷಯ. ನಾವು ನೀಡುವರಕ್ತ ನಮಗೆ ತಿಳಿಯದ ಯಾರಿಗೋ ಜೀವ ನೀಡುತ್ತದೆ. ನಾಳೆ ನಮಗೆ ಅಥವಾ ನಮ್ಮವರಿಗೆ ಇಂತಹ ಸಂದರ್ಭದಲ್ಲಿ ಇನ್ಯಾರೋ ಜೀವ ನೀಡುತ್ತಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ರಕ್ತದಾನ ಮಾಡುವುದು ಮರುಜೀವ ನೀಡುವಷ್ಟು ಪ್ರಮುಖವಾದ ಕೆಲಸ. ಇಂಥಾ ನಿಸ್ವಾರ್ಥ ಸೇವೆಗಳಿಂದ ಕೆಲಸ ಮಾಡುವ ವ್ಯಕ್ತಿಗಳು ಇತಿಹಾಸದಲ್ಲಿ ಗುರುತಿಸಿಕೊಳ್ಳುತ್ತಾರೆ. ಸೇವೆ, ತ್ಯಾಗ ಮತ್ತು ಪ್ರೀತಿ ಎಂಬ ಮೌಲ್ಯಗಳು ಇಂತಹ ಉತ್ತಮ ಕೆಲಸಗಳಿಗೆ ಪ್ರೇರಣೆ ನೀಡುತ್ತವೆ ಎಂದು ಪತ್ರಿಕೋದ್ಯಮಿ ಕೆ.ಬಿ. ಗಣಪತಿ ತಿಳಿಸಿದರು.ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎನ್.ಸಿ.ಸಿ., ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ರೋಟರಿ ಕ್ಲಬ್ ಆಫ್ ಮೈಸೂರು ಮಿಡ್ ಟೌನ್ ಸಹಯೋಗದಲ್ಲಿ ದಿವಂಗತ ಕೆ.ಎಂ. ನಂಜಪ್ಪ ಸ್ಮರಣಾರ್ಥ ಗುರುವಾರ ಆಯೋಜಿಸಿದ್ದ 7ನೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡುವವರು ಈ ರೀತಿ ಮಾನವೀಯತೆ ಮೆರೆಯುತ್ತಾರೆ. ಹಳೆಯ ವಿದ್ಯಾರ್ಥಿಗಳು ಬಂದು ರಕ್ತದಾನ ಮಾಡುತ್ತಿರುವುದು ಹೆಮ್ಮೆಯ ವಿಷಯ. ನಾವು ನೀಡುವರಕ್ತ ನಮಗೆ ತಿಳಿಯದ ಯಾರಿಗೋ ಜೀವ ನೀಡುತ್ತದೆ. ನಾಳೆ ನಮಗೆ ಅಥವಾ ನಮ್ಮವರಿಗೆ ಇಂತಹ ಸಂದರ್ಭದಲ್ಲಿ ಇನ್ಯಾರೋ ಜೀವ ನೀಡುತ್ತಾರೆ. ರಕ್ತದಾನದಿಂದ ಆರೋಗ್ಯ ವೃದ್ಧಿಸುತ್ತದೆ. ಶಿಕ್ಷಣ ಮತ್ತು ಆರೋಗ್ಯ ಇರುವಲ್ಲಿ ಎಂದಿಗೂ ಗೆಲುವು ಮತ್ತು ಸಮೃದ್ಧಿ ಇದ್ದೇ ಇರುತ್ತದೆ ಎಂದು ಅವರು ಹೇಳಿದರು.ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಾಜ್ಯ ಸಮನ್ವಯಾಧಿಕಾರಿ ರಾಜು ಚಂದ್ರಶೇಖರ್ ಮಾತನಾಡಿ, ನಮ್ಮನ್ನು ನಾವು ಉದಾತ್ತ ಕಾರ್ಯದಲ್ಲಿ ತೊಡಗಿದ ಉತ್ತಮ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳಬೇಕು ಇಲ್ಲವೇ ಉದಾತ್ತ ವ್ಯಕ್ತಿಯ ಪ್ರಭಾವಕ್ಕೊಳಗಾಗಬೇಕು. ಇದರಿಂದ ನಾವು ಇಂತಹ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇದು ಸರಿಯಾದ ಸಮಯ. ನಮ್ಮ ದೇಹದಲ್ಲಿರುವ ರಕ್ತ ದೇವರು ನಮಗೆ ನೀಡಿದ ವರದಾನ. ಅದನ್ನು ಇತರರಿಗೂ ಹಂಚುವ ಒಳ್ಳೆಯ ಕಾರ್ಯದಲ್ಲಿ ತೊಡಗೋಣ. ಇದು ರೋಗಿಗಳಿಗೆ ಔಷಧಿಯಾಗಿ ಅವರ ಜೀವ ಉಳಿಸುವ ಕೆಲಸ ಮಾಡುತ್ತದೆ. ಅದರೊಂದಿಗೆ ರಕ್ತದಾನ ಮಡುವುದರಿಂದ ಹೃದಯದ ಸಮಸ್ಯೆ ಮತ್ತು ಕ್ಯಾನ್ಸರ್ ರೋಗದಿಂದ ನಾವು ದೂರ ಇರಬಹುದು. ಇಲ್ಲಿ ಯಾರ ಬಲವಂತ ಇರುವುದಿಲ್ಲ. ನಿಮ್ಮಲ್ಲೆ ಸಾಮಾಜಿಕ ಜಾಗೃತಿ ಮೂಡಬೇಕು ಎಂದು ಅವರು ಹೇಳಿದರು.ಈ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕರು, ಹಳೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಂದ ಒಟ್ಟು 106 ಯೂನಿಟ್ ರಕ್ತ ಸಂಗ್ರಹವಾಯಿತು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಉಪ ಕಾರ್ಯದರ್ಶಿ ನಟರಾಜ್, ಶೇಷಾದ್ರಿಪುರಂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ. ಅನಂತರಾಮ್, ಮಿಡ್ ಟೌನ್ ರೋಟರಿ ಕ್ಲಬ್ ನ ಅಧ್ಯಕ್ಷ ಡಿ. ಶ್ರೀನಿವಾಸನ್, ಕಾರ್ಯದರ್ಶಿ ಸತ್ಯೇಂದ್ರ ಕಾಶ್ಯಪ್, ಮೋಹನ್ ಗುರುಮೂರ್ತಿ, ಸುಂದರ್, ಪಿಯು ಕಾಲೇಜಿನ ಪ್ರಾಂಶುಪಾಲೆ ಎನ್. ಅರ್ಚನಾ ಸ್ವಾಮಿ, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕೆ. ಸೌಮ್ಯಾ ಈರಪ್ಪ, ರೆಡ್ ಕ್ರಾಸ್ ಘಟಕ ಮತ್ತು ರೋಟರಿ ಕ್ಲಬ್ ಸಂಯೋಜಕ ಎಂ. ವಿನಯ್, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಆರ್. ರಾಘವೇಂದ್ರ, ಎನ್.ಸಿ.ಸಿ. ಅಧಿಕಾರಿ ಆರ್. ಕುಮಾರ್ ಇದ್ದರು. ಎಂ. ವಿನಯ್ ಸ್ವಾಗತಿಸಿದರು.. ದೀಕ್ಷಾ ನಿರೂಪಿಸಿದರು.