ಸಾರಾಂಶ
ಕನ್ನಡಪ್ರಭ ವಾರ್ತೆ ನ್ಯಾಮತಿ
ರಾಜ್ಯ ಸರ್ಕಾರ ಪ್ರಸ್ತುತ ನಾಗಮೋಹನ್ ದಾಸ್ ವರದಿಯಂತೆ ಕೊರಚ, ಕೊರಮ, ಭೋವಿ, ಲಂಬಾಣಿ ಮತ್ತು ಇತರೆ ಉಪಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯಲ್ಲಿ ಅವೈಜ್ಞಾನಿಕ ತೀರ್ಮಾನ ವಿರೋಧಿಸಿ ಶುಕ್ರವಾರ ನ್ಯಾಮತಿ ತಾಲೂಕು ಬಂಜಾರ ಸೇವಾ ಸಂಘದಿಂದ ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪಟ್ಟಣದ ಮಹಾಂತೇಶ್ವರ ರಸ್ತೆಯ ಶ್ರೀ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಿಂದ ಹಲವು ಗ್ರಾಮಗಳ ನೂರಾರು ಜನ ವಾಹನಗಳಲ್ಲಿ ಜಾಮಾಯಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ನೆಹರೂ ರಸ್ತೆಯಲ್ಲಿ ಸಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ತಹಸೀಲ್ದಾರ್ ಕಚೇರಿಯವರೆಗೂ ಮೆರವಣಿಗೆ ನಡೆಸಲಾಯಿತು.
ಮುಖಂಡರು ಮಾತನಾಡಿ, ಸರ್ಕಾರವು ಒಳಮೀಸಲಾತಿ ಜಾರಿಗಾಗಿ ನಾಗಮೋಹನ್ ದಾಸ್ ಆಯೋಗ ರಚಿಸಿ, ಅದರಂತೆ 101 ಜಾತಿಗಳ ದತ್ತಾಂಶವನ್ನು ಶೇ.93.5 ಪ್ರಗತಿ ಸಾಧಿಸಿ ಎಡಗೈ ಸಮುದಾಯಕ್ಕೆ ಶೇ.6 ಮೀಸಲಾತಿ, 18 ಉಪ ಜಾತಿಗಳಿಗೆ ಮತ್ತು ದಲಿತ ಬಲಗೈ ಸಮುದಾಯಕ್ಕೆ 20, ಉಪ ಜಾತಿಗಳಿಗೆ ಶೇ.6ರಷ್ಟು ಮೀಸಲು ಮತ್ತು ಅಲೆಮಾರಿ 59, ಸ್ಪರ್ಶ 4 ಸಮುದಾಯ ಶೇ.5ರಷ್ಟು ಮೀಸಲಾತಿ ನೀಡಿಮ ಪರಿಷ್ಕೃತ ವರ್ಗೀಕರಣಕ್ಕೆ ಶಿಫಾರಸು ಮಾಡಿದ್ದಾರೆ ಎಂದರು.ಈ ಬಂಜಾರ ಸಮುದಾಯವು ವಲಸೆ, ಅನಕ್ಷರತೆ, ಬಡತನ ಜತೆಗೆ ಈಗಲೂ ತಾಂಡಗಳಲ್ಲಿ ಮೂಲ ಸೌಕರ್ಯಗಳಿಲ್ಲದೇ ಅತ್ಯಂತ ಹಿಂದುಳಿದಿದೆ. ಈ ಸಮುದಾಯದ ಶೇ.90 ಜನ ದಿನಗೂಲಿ ನಂಬಿ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಸಂಪುಟ ಒಪ್ಪಿರುವ ಒಳ ಮೀಸಲಾತಿಯನ್ನು ಕೂಡಲೇ ವಾಪಸ್ ಪಡೆದು, ಪುನರ್ ಪರಿಶೀಲಿಸಿ ನ್ಯಾಯ ಒದಗಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಮುಖಂಡರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಕಾಶ್ ನಾಯ್ಕ, ಎಸ್.ಎನ್. ಗೋಪಾಲ ನಾಯ್ಕ, ಪೀರ್ಯಾನಾಯ್ಕ, ರೇಣುಕಾನಾಯ್ಕ ಮಾತನಾಡಿದರು. ಬಳಿಕ ನ್ಯಾಮತಿ ತಾಲೂಕು ತಹಸೀಲ್ದಾರ ಎಂ.ಪಿ.ಕವಿರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.ಸೈನಾನಾಯ್ಕ ಪ್ರತಿಭಟನೆ ನೇತೃತ್ವ ವಹಿಸಿದ್ದರು. ದೂದಾನಾಯ್ಕ, ತತ್ಸನಾಯ್ಕ, ಭೂಪಾಲನಾಯ್ಕ, ಶಿವರಾಮ್ ನಾಯ್ಕ, , ಶಂಕರ ನಾಯ್ಕ ಮತ್ತು ಸದಸ್ಯರು ಭಾಗವಹಿಸಿದ್ದರು.
- - --ಚಿತ್ರ: