ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಒಳಮೀಸಲಾತಿಗಾಗಿ ತಾಲೂಕಿನಲ್ಲಿ ಜಾತಿ ಗಣತಿ ಆರಂಭವಾಯಿತು.ಈ ಕುರಿತು ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್. ಗಂಗಪ್ಪ, ತಾಲೂಕಿನಲ್ಲಿ 253 ಮತಗಟ್ಟೆಗಳಿದ್ದು, ಒಂದು ಮತ ಗಟ್ಟೆಗೆ ಒಬ್ಬ ಗಣತಿದಾರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಗಣತಿದಾರರ ಮೇಲೆ ಮೇಲ್ವಿಚಾರಕರು ಇರುತ್ತಾರೆ, ಸಮೀಕ್ಷಾ ಕಾರ್ಯ ಸುಗಮವಾಗಿ ನಡೆಯಲು ತಾಲೂಕು ಮಟ್ಟದ ಸಮಿತಿ ರಚನೆ ಮಾಡಲಾಗಿದ್ದು, ಅದರಲ್ಲಿ ಉಪವಿಭಾಗಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳು, ತಹಶೀಲ್ದಾರರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪುರಸಭಾ ಮುಖ್ಯಾಧಿಕಾರಿಗಳು, ಕ್ಷೇತ್ರಶಿಕ್ಷಣಾಧಿಕಾರಿ ಸದಸ್ಯರಾಗಿರುತ್ತಾರೆ. ಎಲ್ಲಾ ಗಣತಿದಾರರಿಗೆ ತರಬೇತಿ ನೀಡಲಾಗಿದ್ದು, ಸೋಮವಾರ ಮಾಜಿ ಸಚಿವ ದಿ.ಡಿ. ನಾರಾಯಣದಾಸ ಅವರ ನಿವಾಸಕ್ಕೆ ತೆರಳಿ ಗಣಿತಿಗೆ ಚಾಲನೆ ನೀಡಲಾಯಿತು ಎಂದು ಹೇಳಿದರು.ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್. ಗಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಮಾಸ್ಟರ್ ತರಬೇತುದಾರ ಅಜ್ಜಯ್ಯ, ಗಣತಿದಾರ ಜಮೀರ ಅಹ್ಮದ್ ಖಾನ್, ಅಧೀಕ್ಷಕಿ ಯಾಸ್ಮೀನ್ ಹಾಜರಿದ್ದರು.ಜಾತಿಗಣತಿಯಲ್ಲಿ ಪರಿಶಿಷ್ಟ ಜಾತಿ ಎಂದು ಸ್ಪಷ್ಟವಾಗಿ ದಾಖಲಿಸಿ:
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಣತಿ ವೇಳೆ ಸಿಂಧೋಳ್ಳು, ಬೇಡ, ಬುಡ್ಗ ಜಂಗಮ, ದಕ್ಕಲಿಗ, ಹಂದಿ ಜೋಗಿ, ಸಿಳ್ಳೇಕ್ಯಾತ, ದೊಂಬರು, ಚನ್ನದಾಸರು, ಸುಡುಗಾಡು ಸಿದ್ಧರು ಗಣತಿ ಕಾರ್ಯದ ವೇಳೆ ಅರ್ಜಿಗಳನ್ನು ಭರ್ತಿ ಮಾಡುವಾಗ ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಎಂದು ಕಡ್ಡಾಯವಾಗಿ ಬರೆಸಬೇಕೆಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ವೈ. ಶಿವಕುಮಾರ್ ಮನವಿ ಮಾಡಿದರು.ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೀಗಾಗಲೇ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ, ಅಲೆಮಾರಿ ಬುಡಕಟ್ಟು ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟಗಳು ಸಲಹೆ ನೀಡಿದಂತೆ ಸಮುದಾಯದ ಜನರು ಜಾತಿ ಗಣತಿಯಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಿಸಬೇಕೆಂದು ಹೇಳಿದರು.ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ವರದಿ ನೀಡಲು ಏಕ ಸದಸ್ಯ ಆಯೋಗ ರಚನೆ ಮಾಡಿದ್ದು, ಆಯೋಗದ ಶಿಫಾರಸ್ಸಿನ ಅನ್ವಯ ಒಳಮಿಸಲಾತಿ ಕಲ್ಪಿಸುವ ಸಂಬಂಧ ಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಈ ಸಮೀಕ್ಷೆ ಮೇ 5 ರಿಂದ ಆರಂಭಗೊಂಡಿದೆ ಎಂದರು.ಬಳ್ಳಾರಿ ಜಿಲ್ಲೆಯ ಅಲೆಮಾರಿ ಪರಿಶಿಷ್ಟ ಜಾತಿಯ ಪಟ್ಟಗೆ ಸೇರಿರುವ ಸಿಂದೋಳು, ಬೇಡ, ಬುಡ್ಗ, ದಕ್ಕಲಿಗ, ಹಂಡಿಜೋಗಿ, ಸಿಳ್ಳೇಕ್ಯಾತ, ದೊಂಬರು, ಚನ್ನಬಾಸರು, ಸುಡುಗಾಡುಸಿದ್ದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಔದ್ಯೋಗಿಕ ಪ್ರಾತಿನಿಧ್ಯತೆ ಮತ್ತಿತರ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು ಆಯೋಗದ ಉದ್ದೇಶವಾಗಿದೆ. ದತ್ತಾಂಶ ಸಂಗ್ರಹ ಮಾಡುವುದರಿಂದ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿರುವ ಈ ಸಮೂದಾಯಗಳ ಜನಾಂಗದ ಜನಸಂಖ್ಯೆ ಎಷ್ಟು ಇದೆ ಎಂಬ ಮಾಹಿತಿ ಸರ್ಕಾರದ ಗಮನಕ್ಕೆ ಹೋಗುತ್ತದೆ.ಯಾವುದೇ ಕುಟುಂಬಗಳು ಬಿಟ್ಟು ಹೋಗದಂತೆ ಸಮೀಕ್ಷೆ ಮಾಡುವುದು ಮುಖ್ಯವಾಗಿದೆ. ನಮ್ಮ ಸಂಘದ ರಾಜ್ಯ ಪದಾಧಿಕಾರಿಗಳು ಜಿಲ್ಲಾ, ತಾಲೂಕು, ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಮುಖಂಡರು, ಖಜಾಂಚಿ, ಸಮಾಜದ ಕುಲಬಾಂಧವರು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಗಳ ಪದಾಧಿಕಾರಿಗಳಾದ ಡಿ. ರಂಗಯ್ಯ, ಸುಬ್ಬಣ್ಣ, ರಾಮಾಂಜಿನಿ, ಹುಚ್ಚಪ್ಪ, ಹನುಮಂತಪ್ಪ, ಗಾದಿಲಿಂಗ, ಹುಲುಗನ್ನ, ಅಜಪ್ಪ, ಕೆ.ಚನ್ನಬಸಪ್ಪ, ವೆಂಕಟೇಶ್, ಶೈಲಾ ಸೀತಾರಾಮ್, ಕಂಡಪ್ಪ ಸೇರಿದಂತೆ ವಿವಿಧ ಎಸ್.ಸಿ. ಅಲೆಮಾರಿ ಸಮುದಾಯಗಳ ಮುಖಂಡರು ಇದ್ದರು.