ಸಾರಾಂಶ
ಗದಗ: ಒಳಮೀಸಲಾತಿ ಜಾರಿಗೆ ವಿರೋಧಿಸಿ ಭೋವಿ, ಕೊರಮ, ಕೊರಚ, ಲಂಬಾಣಿ, ಚನ್ನದಾಸರ, ಗಂಟಿಚೋರರು, ಸುಡಗಾಡ ಸಿದ್ದರು, ಭಜಂತ್ರಿ, ಕುಂಚಿ ಕೊರವರ, ದಾಸರು ಹಾಗೂ ಇನ್ನೂಳಿದ ಎಲ್ಲ ಪರಿಶಿಷ್ಟ ಜಾತಿಯ ಸಮಾಜದ ಮುಖಂಡರ ನೇತೃತ್ವದಲ್ಲಿ ಶುಕ್ರವಾರ ಹುಲಕೋಟಿ ಚಲೋ ಬೃಹತ್ ಪಾದಯಾತ್ರೆ ನಡೆಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ನಗರದ ಸೇವಾಲಾಲ್ ವೃತ್ತದಿಂದ ಪ್ರಾರಂಭವಾದ ಹುಲಕೋಟಿ ಚಲೋ ಬೃಹತ್ ಪಾದಯಾತ್ರೆಯಲ್ಲಿ ಎಲ್ಲ ಪರಿಶಿಷ್ಟ ಜಾತಿಯ ಸಮಾಜ ಬಾಂಧವರು ರಾಜ್ಯ ಸರ್ಕಾರ ಪಜಾ ಯ ಒಳಮೀಸಲಾತಿ ಕುರಿತಾಗಿ ಅವೈಜ್ಞಾನಿಕ,ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶ ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೋಲೆಯಾಗಿದೆ ಎಂದು ಸರ್ಕಾರ ನಡೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.ಪಜಾ ಒಳಮೀಸಲಾತಿಯ (ವರ್ಗೀಕರಣ) ಸಂಬಂಧಿಸಿದಂತೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಸಪ್ತಪೀಠವು ತೀರ್ಪು ನೀಡಿದ್ದು ಸರಿಯಷ್ಟೆ, ಈ ಬಗ್ಗೆ ರಾಜ್ಯ ಸರ್ಕಾರ ಪ. ಜಾಯ ಒಳಮೀಸಲಾತಿ ಕುರಿತಾಗಿ ಅವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶ ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಖಂಡನೀಯ.
ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ ಹಾಗೂ ವಸ್ತುನಿಷ್ಟ ಅಂಕಿ-ಅಂಶಗಳ ಕುರಿತಾದ ಕೊರತೆ ಇದ್ದು, ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಏಕಾಏಕಿ ಒಳಮೀಸಲಾತಿ ವರ್ಗೀಕರಣ ಕುರಿತಾಗಿ ಏಕಪಕ್ಷೀಯ ನಿರ್ಧಾರ ಸರ್ಕಾರ ಕೈಗೊಂಡಿದ್ದು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂವಿಧಾನದ ಆಶಯದಂತೆ ಅಮಾನತೆ, ಸಮತೆ, ಭ್ರಾತೃತ್ವದ ತತ್ವವನ್ನು ಪಾಲಿಸದೆ ಒಂದೇ ವರ್ಗದ ಒತ್ತಡಕ್ಕೆ ಮಣಿದು ಒಳಮೀಸಲಾತಿ ಮಾಡಿದ್ದೆ ಆದಲ್ಲಿ ಹಾಗೂ ಸಾಕಷ್ಟು ಸಮಯ ಸಮರ್ಪಕ ಅಧ್ಯಯನ ಮಾಡದೆ ಅನುಷ್ಠಾನ ಮಾಡಿದ್ದಲ್ಲಿ, ಸರ್ಕಾರ, ಸಚಿವರ, ಶಾಸಕರ, ಪಕ್ಷದ ವಿರುದ್ಧ ಗಂಭೀರ ಸ್ವರೂಪದ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಸಿದರು.
ನಿಖರವಾದ ದತ್ತಾಂಶ ಮತ್ತು ಜಾತಿ ಜನಗಣತಿ ಮಾಡಬೇಕು. ವಸ್ತುನಿಷ್ಠ ಸಾಕ್ಷ್ಯಾಧಾರ ಆಧರಿಸಿ ಸಿದ್ಧಪಡಿಸಿರುವ ದತ್ತಾಂಶ ಮರುಪರಿಶೀಲನೆ ಅಥವಾ ಪರೀಕ್ಷೆಗೆ ಒಳಪಡಿಸಲು ಯೋಗ್ಯವಾಗಿರುವಷ್ಟು (ಎಂಪಿರೇಕಲ್ ಡೇಟಾ) ವೈಜ್ಞಾನಿಕವಾಗಿರುವಂತಹ ದತ್ತಾಂಶ ಆಧರಿಸಿ ಮಾತ್ರ ಮೀಸಲಾತಿ ಕಲ್ಪಿಸಬೇಕು ಎಂಬ ಅರ್ಥದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ, ಅದರಂತೆ ನಿಖರವಾದ ದತ್ತಾಂಶ ಕ್ರೂಢೀಕರಣ ಮಾಡಬೇಕು. 2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿಯ 101 ಸಮುದಾಯದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಜನರಿದ್ದಾರೆ. ಆದರೆ ಒಳಮೀಸಲಾತಿಯ ಏಕ ಸದಸ್ಯ ಆಯೋಗಕ್ಕೆ ಜಸ್ಟಿಸ್ ನಾಗಮೋಹನದಾಸ್ ಅವರನ್ನು ನೇಮಕ ಮಾಡಿ, ಸಮಯ ಕೇವಲ ಎರಡು ತಿಂಗಳು ಮಾತ್ರ ನೀಡಿದ್ದು. ಈ ಸಮಯದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೋಗಿ ಜಾತಿ ಗಣತಿ ಮಾಡಲು ಸಾಧ್ಯವಾ, ಜಾತಿಗಣತಿ ಮಾಡಿ ಪರಿಶಿಷ್ಟ ಜಾತಿಯ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಸ್ಥಿತಿಗತಿ, ಸರ್ಕಾರಿ ಸೌಲಭ್ಯ ಪಡೆದುಕೊಂಡ ಕುರಿತು ಸಮಗ್ರ ಮಾಹಿತಿ ಪಡೆಯಲು ಸಾಧ್ಯವಿಲ್ಲ, ಹಾಗಾಗಿ ನಿಖರವಾದ ದತ್ತಾಂಶ ಕ್ರೋಢಿಕರಿಸಲು ಸಾಕಷ್ಟು ಸಮಯಾವಕಾಶ ನೀಡಬೇಕು. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪಜಾ ಮತ್ತು ಪಪ ಮೀಸಲಾತಿಯೊಳಗೆ ಉಪ-ವರ್ಗೀಕರಣ ಮಾಡಲು ಹೇಳಿದೆ, ಆದರೆ ರಾಜ್ಯ ಸರ್ಕಾರ ಕೇವಲ ಪರಿಶಿಷ್ಟ ಜಾತಿಯಲ್ಲಿ ಮಾತ್ರ ಒಳಮೀಸಲಾತಿ ಮಾಡುವ ಬದಲು ಸಪ್ರೀಂ ಕೋರ್ಟ ನಿರ್ದೇಶನದಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಈ ವೇಳೆ ಭೋವಿ, ಕೊರಮ, ಕೊರಚ, ಲಂಬಾಣಿ, ಚನ್ನದಾಸರ, ಗಂಟಿಚೋರರು, ಸುಡಗಾಡ ಸಿದ್ದರು, ಬಜಂತ್ರಿ, ಕುಂಚಿ ಕೊರವರ, ದಾಸರು ಹಾಗೂ ಇನ್ನೂಳಿದ ಎಲ್ಲಾ ಪರಿಶಿಷ್ಟ ಜಾತಿಯ ಸಮಾಜದ ಮುಖಂಡರು, ಹಿರಿಯರು, ಯುವಕರು, ಮಹಿಳೆಯರು ಇದ್ದರು.