ಸಾರಾಂಶ
ಹುಬ್ಬಳ್ಳಿ
ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಡಿ. 16ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಶಾಸಕರಾದ ಪ್ರಸಾದ ಅಬ್ಬಯ್ಯ ಹಾಗೂ ಮಹೇಶ ಟೆಂಗಿನಕಾಯಿ ಅವರ ನಿವಾಸದ ಎದುರು ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ತಮಟೆ ಚಳವಳಿ ಹಮ್ಮಿಕೊಳ್ಳಲಾಯಿತು.ಆ. 1ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ತೀರ್ಪು ಬಂದು 4 ತಿಂಗಳಾದರೂ ರಾಜ್ಯ ಸರ್ಕಾರ ಕಾಟಾಚಾರಕ್ಕೆ ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ, 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ. ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ಕೊಡದೆ ಕಾಲಾಹರಣ ನಡೆಸಲಾಗುತ್ತಿದೆ. ಹೊಸದಾಗಿ ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಅಥವಾ ಒಳಮೀಸಲಾತಿ ಹೋರಾಟದಲ್ಲಿದ್ದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ, ಒಳಮೀಸಲಾತಿ ಜಾರಿ ಆಗುವವರೆಗೆ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಸರ್ಕಾರ ನೀಡಿದ್ದ ಭರವಸೆ ಇಂದು ಹುಸಿಯಾಗಿದೆ. ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೇ ಇದೆ. ಇದನ್ನು ಒಕ್ಕೂಟದ ವತಿಯಿಂದ ಉಗ್ರವಾಗಿ ಖಂಡಿಸಲಾಗುವುದು ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾದಿಗ ದಂಡೋರ ರಾಜ್ಯ ವಕ್ತಾರ ಮಂಜುನಾಥ ಕೊಂಡಪಲ್ಲಿ, ಸೂರ್ಯನಾರಾಯಣ ಕನಮಕ್ಕಲ, ನಾಗೇಶ ಕತ್ರಿಮಾಲ, ಶ್ರೀನಿವಾಸ ರಾಮಗಿರಿ, ಗೋವಿಂದ ಬೆಲ್ಡೋಣಿ, ಸತ್ಯನಾರಾಯಣ ಎಂ, ಗುರು ಬೆಂಗಳೂರು, ಪಿ.ಪಿ. ಮಲ್ಯಾಳ, ಯಲ್ಲಪ್ಪ ಹರಿಜನ, ಪರಶುರಾಮ ಮಾದರ ಸೇರಿದಂತೆ ಹಲವರಿದ್ದರು.