ಒಳಮೀಸಲಾತಿ: ನ್ಯಾಯಯುತ ವರ್ಗೀಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

| Published : Oct 14 2025, 01:01 AM IST

ಒಳಮೀಸಲಾತಿ: ನ್ಯಾಯಯುತ ವರ್ಗೀಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧವಾಗಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪ್ರಾರಂಭವಾದ ಬೃಹತ್ ಪ್ರತಿಭಟನೆ, ಅನಿರ್ದಿಷ್ಟಾವಧಿಯ ಅಹೋರಾತ್ರಿ ಧರಣಿ 9ನೇ ದಿನದತ್ತ ತಲುಪಿದೆ.ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಸೋಮವಾರ ಜಿಲ್ಲೆಯ 72 ತಾಂಡಾಗಳ ಪೈಕಿ ನಿಗದಿತ ವೇಳಾಪಟ್ಟಿಯಂತೆ ತಾಲೂಕಿನ ಅಡವಿಸೋಮಾಪುರ(ಸಣ್ಣ ಹಾಗೂ ದೊಡ್ಡ ತಾಂಡಾ), ಮುಂಡರಗಿ ತಾಲೂಕಿನ ಮುರಡಿ, ದಿಂಡೂರ ತಾಂಡಾ, ಶಿರಹಟ್ಟಿ ತಾಲೂಕಿನ ಕೆರಳ್ಳಿ ತಾಂಡಾ, ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಮತ್ತು ಕೊಂಡಿಕೊಪ್ಪ ತಾಂಡಾ, ಗಜೇಂದ್ರಗಡ ತಾಲೂಕಿನ ಅಮರಗಟ್ಟಿ ಮತ್ತು ನರೇಗಲ್ಲ ತಾಂಡಾಗಳ ಸಾವಿರಾರು ಬಂಜಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದೂರದ ಊರುಗಳಿಗೆ ಕೂಲಿಯ ಕೆಲಸಕ್ಕಾಗಿ ತೆರಳುವ ಬಂಜಾರ ಜನರು ಸಲಕೆ ಹಾಗೂ ಗುದ್ದಲಿಯೊಂದಿಗೆ ನಗರದ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಭಾಗವಹಿಸಿ, ಮುಳಗುಂದ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ನೀತಿಯನ್ನು ತೀವ್ರವಾಗಿ ವಿರೋಧಿಸಿದರು.ಈ ವೇಳೆ ಭಾರತ ಸರ್ಕಾರದ ಯುವಜನ ಸೇವೆ ಪ್ರಾಧಿಕಾರದ ಸದಸ್ಯ ಲೋಕೇಶ್ವರ ನಾಯ್ಕ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬಂಜಾರ ಜನಾಂಗಕ್ಕೆ ಅವೈಜ್ಞಾನಿಕ ಒಳಮೀಸಲಾತಿ ಜಾರಿಗೆ ತಂದಿದ್ದು, ಇದು ದೊಡ್ಡ ಮೋಸವಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟ ರಾಜ್ಯ ಮಟ್ಟದಷ್ಟೇ ಅಲ್ಲದೆ, ದೇಶವ್ಯಾಪಿ ಹೋರಾಟಕ್ಕೆ ದಾರಿದೀಪವಾಗಲಿದೆ. ಸರ್ಕಾರ ಸಮುದಾಯದ ನಿಜವಾದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಪರಿಗಣಿಸಿ ನ್ಯಾಯಯುತ ವರ್ಗೀಕರಣ ಮಾಡಬೇಕೆಂದು ಆಗ್ರಹಿಸಿದರು.ಸೋನು ಲಮಾಣಿ ಮಾತನಾಡಿ, ರಾಜ್ಯಾದ್ಯಂತ ಕೊಲಂಬೊ ಸಮಾಜದ ಯುವಕರು ಹಾಗೂ ಹಿರಿಯರು ಸಂಘಟಿತವಾಗಿ ಹೋರಾಟ ಆರಂಭಿಸಿದ್ದು, ಸರ್ಕಾರವು ಒಳಮೀಸಲಾತಿ ವರ್ಗೀಕರಣವನ್ನು ಪುನರ್‌ ಪರಿಶೀಲಿಸಿ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ರವಿಕಾಂತ್ ಅಂಗಡಿ, ಕೆ.ಸಿ. ನಭಾಪುರ, ಪರಮೇಶ್ ನಾಯಕ್, ಚಂದು ನಾಯಕ್, ಧನಸಿಂಗ್ ನಾಯಕ್, ಈಶ್ವರ್ ನಾಯಕ್, ಐ.ಎಸ್. ಪೂಜಾರ್, ಟಿ.ಡಿ. ಪೂಜಾರ್, ವಿಠಲ್ ತೋಟದ, ಮನೋಜ್ ಕಾರಬಾರ, ಸಂತೋಷ ಪವಾರ್, ತೇಜಪ್ಪ ನಾಯಕ್, ಷಣ್ಮುಖ ಆರವಾರಿ, ಭೀಮಪ್ಪ ಲಮಾಣಿ, ಪಾಂಡಪ್ಪ ನಾಯಕ್ ಸೇರಿದಂತೆ ಮುಂತಾದ ತಾಂಡಾಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.