ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ನ್ಯಾ.ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿ ದೋಷಪೂರಿತ ಹಾಗೂ ಅವೈಜ್ಞಾನಿಕವಾಗಿದ್ದು ಭೋವಿ ಸಮುದಾಯವರಿಗೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಈ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದರಲ್ಲದೆ ಹಳೇ ಮೀಸಲಾತಿಯಂತೆ ನೇಮಕಾತಿ ಮಾಡುವಂತೆ ಭೋವಿ ಸಮುದಾಯದ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾ. ನಾಗಮೋಹದಾಸ್ ರವರ ವರದಿಯನ್ನು ತಿದ್ದುಪಡಿ ಮಾಡಿ ಎ, ಬಿ, ಸಿ ವರ್ಗಗಳಾಗಿ ವಿಭಾಗಿಸಿ 6:6:5 ಅನುಪಾತದಲ್ಲಿ ಮೀಸಲಾತಿ ಹಂಚಿರುವುದು ಅಸಮರ್ಪಕವಾಗಿದೆ, ಸಿ ವರ್ಗಕ್ಕೆ ಸೇರಿದ ಭೋವಿ, ಬಂಜಾರ, ಕೊರಮ, ಕೋರಚ ಸೇರಿ 59 ಅಲೆಮಾರಿ ಸಮುದಾಯಗಳಿಗೆ ಕೇವಲ ಶೇ.5ರಷ್ಟು ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಳ ಮೀಸಲಾತಿಗೆ ನಮ್ಮ ಸಮುದಾಯದ ವಿರೋಧವಿಲ್ಲ. ಆದರೆ ಕಳೆದ ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಬಿದಿದ್ದಂತಹ ಒಳಮೀಸಲಾತಿ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಸದುದ್ದೇಶದಿಂದ ನ್ಯಾ.ನಾಗಮೋಹನ್ ದಾಸ್ ರವರ ಮೂಲಕ ಜನಗಣತಿ ನಡೆಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಬಂಜಾರ, ಭೋವಿ, ಕೊರಮ, ಕೊರಚ ಸೇರಿ 63 ಜಾತಿಗಳಿಗೆ ಅನ್ಯಾಯ ಮಾಡಿದೆ. ಈ ಹಿಂದೆ ಕೇವಲ ನಾಲ್ಕು ಜಾತಿಗಳಿಗೆ ಬೊಮ್ಮಾಯಿ ಸರ್ಕಾರ ಶೇ. 4.5 ಮೀಸಲಾತಿ ನೀಡಿತ್ತು. ಈಗ ಕಾಂಗ್ರೆಸ್ ಸರ್ಕಾರ ರದ್ದು ಪಡಿಸಿ 63 ಜಾತಿಗಳಿಗೆ ಕೇವಲ ಶೇ. 5 ಮೀಸಲಾತಿ ನೀಡಿತ್ತು. ಇದರ ವಿರುದ್ಧ ಪಕ್ಷಪಾತವಾಗಿ ಒಟ್ಟಾಗಿ ಹೋರಾಟ ಮಾಡಬೇಕು ಒಳಮೀಸಲಾತಿ ಯಿಂದ ಭೋವಿ, ಬಂಜಾರ (ಲಂಬಾಣಿ), ಕೊರಮ, ಕೊರಚ, ಸಮಗಾರ, ಚರ್ಮಕಾರ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಲಿರುವ ಅನ್ಯಾಯವನ್ನು ಸರಿಪಡಿಸದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ ಅವರು ಈ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿ ರಚಿಸಿ, ವರದಿಯನ್ನು ಸಿದ್ಧಪಡಿಸಬೇಕು. ಅದರ ಆಧಾರದಲ್ಲಿ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು ಎಂದರು.ಭೋವಿ ಸಂಘದ ಜಿಲ್ಲಾದ್ಯಕ್ಷ ಪಿ.ಡಿ.ವೆಂಕಟರವಣ ಮಾತನಾಡಿ, ಒಳಮೀಸಲಾತಿ ಹಂಚಿಕೆ ಸಂಬಂಧಿಸಿದಂತೆ ಗೊಂದಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರೆಗೆ ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆ ಆಗುವವರೆಗೆ ಒಳ ಮೀಸಲಾತಿ ರಹಿತವಾಗಿ ಹಳೆ ಮೀಸಲಾತಿ ಅಡಿಯಲ್ಲಿಯೇ ನೇಮಕಾತಿ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಭೋವಿ ಸಂಘದ ಅಧ್ಯಕ್ಷ ವಿನಯ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಅಶ್ವತ್ಥಪ್ಪ ಶ್ರೀರಾಮ ನಾಯಕ್, ಶ್ರೀನಿವಾಸ್, ರಮೇಶ್, ನರೇಂದ್ರ, ಚಲಪತಿ, ತಿಪ್ಪಣ್ಣ, ಚನ್ನರಾಯಣಪಲ್ಲಿ ಅಚ್ಚಪ್ಪ, ವೇಣು, ಈರಪ್ಪ ಇದ್ದರು. 09ಬಿಜಿಪಿ-3: ಬಾಗೇಪಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮುದಾಯದ ಮುಖಂಡ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಮಾತನಾಡಿದರು.