ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಪೂರ್ಣ ಪೀಠವು ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ದೊರೆತ ಗೆಲುವಾಗಿದೆ.
ಹಳಿಯಾಳ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಒಳಮೀಸಲಾತಿಯನ್ನು ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ಪೂರ್ಣಪೀಠ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿ ಶುಕ್ರವಾರ ಪಟ್ಟಣದಲ್ಲಿ ವಿವಿಧ ದಲಿತಪರ ಸಂಘಟನೆಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿ ಸಂಭ್ರಮಿಸಿದವು.ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಪೋಮಣ್ಣ ದಾನಪ್ಪನವರ ಅವರು, ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಪೂರ್ಣ ಪೀಠವು ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ದೊರೆತ ಗೆಲುವಾಗಿದೆ. ಈ ತೀರ್ಪಿನಿಂದ ದಶಕಗಳಿಂದ ನಡೆಯುತ್ತಿದ್ದ ನಿರಂತರ ಹೋರಾಟಕ್ಕೆ ಅಭೂತಪೂರ್ವ ಜಯ ದೊರಕಿದೆ ಎಂದರು.ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಹೊನ್ನೋಜಿ ಮಾತನಾಡಿ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿದ್ದ ಬಿಜೆಪಿ ಸರ್ಕಾರವು ಒಳಮೀಸಲಾತಿಯ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಿತು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ತೀರ್ಪನ್ನು ಸ್ವಾಗತಿಸಿ ಒಳಮೀಸಲಾತಿಯನ್ನು ಜಾರಿ ಮಾಡುವ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಹನುಮಂತ ಚಲವಾದಿ, ಶಿವಾನಂದ ಮೇತ್ರಿ, ಪವಿತ್ರ ಮೇತ್ರಿ, ವಿಲಾಸ ಮೇತಿ, ಹನುಮಂತ ಚಿನಗಿನಕೊಪ್ಪ, ಮಹೇಶ ಮಾದಾರ, ದೇಮಣ್ಣ ಮೇತ್ರಿ, ಚಂದ್ರಕಾಂತ ಕಲಬಾವಿ, ರಾಘವೇಂದ್ರ ಚಲವಾದಿ, ಕುಮಾರ ಕಲಬಾವಿ, ಪರಶುರಾಮ ಮೇತ್ರಿ, ಮಾರುತಿ ಮೇತ್ರಿ, ಪಾಂಡು ಚಲವಾದಿ, ಸಂಜು ಚಲವಾದಿ, ಅರ್ಜುನ ಚಲವಾದಿ ಇತರರು ಇದ್ದರು.