ಒಳಮೀಸಲಾತಿ: ಸುಪ್ರೀಂ ತೀರ್ಪು ಸ್ವಾಗತಿಸಿ ಸಂಭ್ರಮ

| Published : Aug 02 2024, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಸುಪ್ರಿಂಕೋರ್ಟ್ ಒಳಮೀಸಲಾತಿ ವರ್ಗೀಕರಣ ಕುರಿತು ನೀಡಿದ ತೀರ್ಪು ಸ್ವಾಗತಾರ್ಹ ಎಂದು ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ ವೃತ್ತದಲ್ಲಿ ಡಿಎಸ್‌ಎಸ್ ಮುಖಂಡರು ಗುರುವಾರ ಪಟಾಕಿ ಸಿಡಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಭ್ರಮ ಆಚರಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸುಪ್ರಿಂಕೋರ್ಟ್ ಒಳಮೀಸಲಾತಿ ವರ್ಗೀಕರಣ ಕುರಿತು ನೀಡಿದ ತೀರ್ಪು ಸ್ವಾಗತಾರ್ಹ ಎಂದು ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ ವೃತ್ತದಲ್ಲಿ ಡಿಎಸ್‌ಎಸ್ ಮುಖಂಡರು ಗುರುವಾರ ಪಟಾಕಿ ಸಿಡಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಭ್ರಮ ಆಚರಿಸಿದರು.

ಈ ವೇಳೆ ಡಿಎಸ್‌ಎಸ್ ಮುಖಂಡರಾದ ವೈ.ಎಸ್.ಮ್ಯಾಗೇರಿ, ತಮ್ಮಣ್ಣ ಕಾನಾಗಡ್ಡಿ ಮಾತನಾಡಿ, ದಶಕಗಳಿಂದ ದಲಿತ ಸಂಘಟನೆಗಳು ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಮ್ಮ ಹಕ್ಕು ಪಡೆಯಲು ಒಳಮೀಸಲಾತಿ ವರ್ಗೀಕರಣಕ್ಕಾಗಿ ನಡೆಸಿದ ಹೋರಾಟದಿಂದ ಇಂದು ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಹೋರಾಟಕ್ಕೆ ಸಂದ ಜಯ. ಸರ್ಕಾರದ ಮೀಸಲಾತಿಯ ಸರಿಯಾದ ಪ್ರಯೋಜನ ಪಡೆಯಲಾಗದೇ ನೋವು ಅನುಭವಿಸುತ್ತಿದ್ದ ಪರಿಶಿಷ್ಟ ಜಾತಿ, ಪಂಗಡದ ಜನಾಂಗಕ್ಕೆ ಈ ತೀರ್ಪು ನ್ಯಾಯ ನೀಡಿದೆ ಎಂದು ಹೇಳಿದರು.ಸುಪ್ರೀಂ ಕೋರ್ಟ್‌ ಸಿಜೆಐ ಚಂದ್ರಚೂಡ ನೇತೃತ್ವದ ಏಳು ಸದಸ್ಯರ ಪೀಠ ಒಳಮೀಸಲಾತಿ ನೀಡುವ ಪ್ರಸ್ತಾವವನ್ನು ಎತ್ತಿಹಿಡಿದು ಒಳಮೀಸಲಾತಿ ಸಂವಿಧಾನದ ಬಾಹಿರವಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕೆನ್ನುವುದು ಸಂವಿಧಾನದ ಮೂಲಮಂತ್ರ ಎಂದು ಐತಿಹಾಸಿಕ ತೀರ್ಪು ನೀಡಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹರೀಶ ಮ್ಯಾಗೇರಿ, ಯಮನಪ್ಪ ಮ್ಯಾಗೇರಿ, ಕನಕೇಶ ಬಾಗೇವಾಡಿ, ಸಂಗಮೇಶ ಕಳ್ಳಿಮನಿ, ಮಹೇಶ ಮ್ಯಾಗೇರಿ, ಗಂಗಾಧರ ಮ್ಯಾಗೇರಿ, ಶ್ರೀಶೈಲ ಬ್ಯಾಕೋಡ, ಹಣಮಂತ ಮ್ಯಾಗೇರಿ, ಭರತ ಉಕ್ಕಲಿ, ಬಸವರಾಜ ಅಂಬೇಡ್ಕರ, ಅವ್ವಣ್ಣ ಅಂಬಾಗೋಳ ಇತರರು ಇದ್ದರು