ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಮಾದಿಗ ಸಮಾಜದ ಮಕ್ಕಳು ವಿದ್ಯಾವಂತರಾಗಿ ಆಧುನಿಕ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಬದುಕಬೇಕೆಂದು ಹಿರಿಯೂರ ಆಧಿಜಾಂಭವ ಮಹಾಸಂಸ್ಥಾನ ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಾಕ್ಷರಿಮುನಿ ದೇಶಿಕೇಂದ್ರ ಸ್ವಾಮಿಗಳು ತಿಳಿಸಿದರು.ಪಟ್ಟಣದ ತಾಪಂ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕೀರ್ಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯಕ್ಕೆ ಒಳಮೀಸಲಾತಿ ಬರುವುದು ನಿಶ್ಚಿತವಾಗಿದೆ. ಆ. 4ರಂದು ಒಳ ಮೀಸಲಾತಿ ವರದಿ ಸಲ್ಲಿಕೆಯಾಗುತ್ತದೆ. ನಂತರ ಸರ್ಕಾರ ಶೀಘ್ರವಾಗಿ ಮೀಸಲಾತಿ ಜಾರಿ ಮಾಡುತ್ತದೆ. ಸಮಾಜದವರೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಮಾದಿಗ ಸಮುದಾಯದ ಜನರು ಶಿಕ್ಷಣದಿಂದ ಬಹಳ ಹಿಂದುಳಿದಿದ್ದು, ಮುಂದಿನ ದಿನದಲ್ಲಿ ಸಮುದಾಯದ ಮಕ್ಕಳು ಶಿಕ್ಷಣದ ಬಗ್ಗೆ ಗಮನ ಹರಿಸಬೇಕು, ಮಹನೀಯರ ಆದರ್ಶಗಳನ್ನು ಮನೆ ಮನೆಗೆ ತಿಳಿಸಬೇಕಿದೆ ಎಂದರು.ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮಾತನಾಡಿ, ನಾನು ಮುಸ್ಲಿಮನಾದರೂ ನನ್ನ ಮಗಳಿಗೆ ಹಿಂದುಸ್ತಾನಿ ಸಂಗೀತ ಪಾಠ ಕಲಿಸಿದ್ದೇನೆ. ನನ್ನ ಮನೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ ಭಾವಚಿತ್ರ ಇಟ್ಟು ಪೂಜಿಸುತ್ತೇನೆ. ರಾಜಕಾರಣಿಗಳು ಸಮಾನತೆಗೆ ನಾವೆಲ್ಲರೂ ಒಂದೇ ಎನ್ನುತ್ತಾರೆ. ಮನೆಯಲ್ಲಿ ಅಸ್ಪೃಶ್ಯತೆ ಅನುಸರಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಚ್ಚರವಾಗಿರಿ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಹೆಚ್ಚು ಫೇಲ್ ಆಗುತ್ತಿದ್ದಾರೆ. ಮಕ್ಕಳ ಬಗ್ಗೆ ಗಮನ ನೀಡಿ. ಅಂಬೇಡ್ಕರ್ ಅವರಂತೆ ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು ಎಂದರು.
ಜಗಳೂರಿನ ಪ್ರಗತಿಪರ ಚಿಂತಕ ಸಿ.ತಿಪ್ಪೇಸ್ವಾಮಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ ವಿಚಾರಗಳನ್ನು ಸಮುದಾಯದ ಜನರು ಅಳವಡಿಸಿಕೊಳ್ಳಬೇಕು ಎಂದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಬ್ಬಳ್ಳಿ ಮೈಲಪ್ಪ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಅಂಬೇಡ್ಕರ್ ಭೀಮವಾದ ಅಧ್ಯಕ್ಷ ಸುಭಾಷ್, ಚಲವಾದಿ ಸಮಾಜದ ಮುಖಂಡ ಗುಂಡಗತ್ತಿ ಕೊಟ್ರಪ್ಪ ಮಾತನಾಡಿದರು. ಈ ವೇಳೆ ಬಸವರಾಜ್ ಸಂಗಪ್ಪನವರ್, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಸವಣೂರ್ ಯಲ್ಲಪ್ಪ, ಕೆ.ಮಂಜಪ್ಪ, ಸಿ.ಅಂಜಿನಪ್ಪ, ಎ.ಅಶೋಕ ಕಣವಿಹಳ್ಳಿ, ಮಹಾಂತೇಶ್ ಹರಿಯಮ್ಮನಹಳ್ಳಿ, ಕಲ್ಲಹಳ್ಳಿ ಹನುಮಂತಪ್ಪ ಸೇರಿದಂತೆ ಇತರರಿದ್ದರು.