ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಮಾದಿಗ ಸಮುದಾಯಗಳ ಒಕ್ಕೂಟದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಅನೇಕ ದಶಕಗಳಿಂದ ಮಾದಿಗರು ತಮ್ಮ ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಮಾದಿಗರಿಗೆ ನ್ಯಾಯ ಕೊಡಿಸಲು ಒಳಮೀಸಲಾತಿಯನ್ನು ಬೇಗ ಜಾರಿ ಮಾಡಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಇಂದು ರಾಜ್ಯದ 26 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು, ಪಟ್ಟಣ ಪ್ರದೇಶಗಳಲ್ಲೂ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಇದು ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ವಿರುದ್ಧದ ಹೋರಾಟವಲ್ಲ. ಸಾಂವಿಧಾನಿಕ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ಒಳ ಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಬರೀ ಓಲೈಕೆ ಮಾಡುತ್ತೇವೆ ಎಂದರೆ ನಡೆಯುವುದಿಲ್ಲ. ಮೀಸಲಾತಿಗಾಗಿ ಕಾದು ಕಾದು ನಮ್ಮ ಸಹನೆಯ ಕಟ್ಟೆ ಒಡೆದು ಹೋಗಿದೆ. ಇದೇ ರೀತಿ ಬರೀ ಭರವಸೆ ನೀಡುವುದರಲ್ಲೇ ಮುಳುಗಿದರೆ ಮುಂದಿನ ದಿನಗಳಲ್ಲಿ ಮಾದಿಗರಿಂದ ಅಸಹಕಾರ ಚಳವಳಿ ಆರಂಭಿಸುತ್ತೇವೆ ಎಂದು ನಾರಾಯಣಸ್ವಾಮಿ ಹೇಳಿದರು.ರಾಜ್ಯ ಸರ್ಕಾರಕ್ಕೆ ಅಧಿಕಾರದ ಚಿಂತೆಯಾಗಿದೆ. ಅದರ ಬಗ್ಗೆಯೇ ಸಭೆ ನಡೆಸುತ್ತಾರೆ. ಆದರೆ, 1976ರಿಂದ ಮಾದಿಗರಿಗೆ ಆಗಿರುವ ಅನ್ಯಾಯದ ಕುರಿತು ವರದಿ ನೀಡಲು ಕೇಳಿದರೆ ಮುಖ್ಯ ಕಾರ್ಯದರ್ಶಿಯವರು ಸಭೆಯನ್ನು ನಡೆಸಲು ಸಿದ್ಧರಿಲ್ಲ. ಮಾದಿಗರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಕಳೆದ 40 ವರ್ಷಗಳಿಂದ ಆಗಿರುವ ಅನ್ಯಾಯವನ್ನು ಪರಿಗಣಿಸಿ ಒಳಮೀಸಲಾತಿ ನೀಡಬೇಕು. ಹಳೇ ಬಾಕಿ ಚುಕ್ತಾ ಮಾಡದಿದ್ದರೆ ನಮ್ಮ ಹೋರಾಟ ತೀವ್ರವಾಗುತ್ತದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ತೆಲಂಗಾಣ, ಹರಿಯಾಣ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಜಾರಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಮಾದಿಗರ ಮತ ಇಲ್ಲದೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎನ್ನುವುದನ್ನು ರಾಜಕಾರಣಿಗಳು ನೆನಪಿಟ್ಟುಕೊಳ್ಳಬೇಕು. ಮಾದಿಗರ ಮತಗಳಿಂದ ಗೆದ್ದು ವಿಧಾನಸೌಧ ಪ್ರವೇಶಿಸಿರುವ ಶಾಸಕರು ಬಾಯಿ ಬಿಡುತ್ತಿಲ್ಲ. ಮಾದಿಗರ ಪರವಾಗಿ ಧ್ವನಿ ಎತ್ತದೆ ಇದ್ದರೆ ಮುಂದಿನ ಚುನಾವಣೆಯಲ್ಲಿ ಯಾವ ಯೋಗ್ಯತೆ ಇಟ್ಟುಕೊಂಡು ಮತಯಾಚಿಸುತ್ತಿರಿ? ಮಾದಿಗರ ಮಕ್ಕಳು ಆರ್ಥಿಕ ಸಮಸ್ಯೆಯಿಂದ ಎಂಬಿಬಿಎಸ್ ಸೇರಿತೆ ವಿವಿಧ ಕೋರ್ಸ್‌ಗಳನ್ನು ಮಾಡಲಾಗುತ್ತಿಲ್ಲ ಎಂದು ಬೇಸರ ನಾರಾಯಣಸ್ವಾಮಿ ವ್ಯಕ್ತಪಡಿಸಿದರು.ಮಾದಿಗ ಸಮುದಾಯದ ಮುಖಂಡರು, ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಒಳ ಮೀಸಲಾತಿ ಹೋರಾಟಕ್ಕೆ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘ ಬೆಂಬಲಿಸಿತು.