ಅವಿಭಕ್ತ ಕುಟುಂಬಗಳಿಗೆ ಮಾತೃತ್ವದ ಅಂತಃಕರಣ: ರಾಜೇಶ್ವರಿ ಚರಂತಿಮಠ

| Published : Mar 12 2024, 02:04 AM IST

ಅವಿಭಕ್ತ ಕುಟುಂಬಗಳಿಗೆ ಮಾತೃತ್ವದ ಅಂತಃಕರಣ: ರಾಜೇಶ್ವರಿ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ನಗರದ ಬಿವಿವಿ ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆಬಿವಿವಿ ಸಂಘದ ಅಕ್ಕನ ರುದ್ರಬಳಗದ ಅಧ್ಯಕ್ಷೆ ರಾಜೇಶ್ವರಿ ಚರಂತಿಮಠ ಚಾಲನೆ ನೀಡಿ ಮಾತನಾಡಿ, ಸಹನೆ ಮತ್ತು ತಾಳ್ಮೆ ಮಹಿಳೆಯ ಅತಿದೊಡ್ಡ ಶಕ್ತಿ. ಅವಿಭಕ್ತ ಕುಟುಂಬಗಳಿಗೆ ಮಾತೃತ್ವದ ಅಂತಃಕರಣವೇ ಚೈತನ್ಯವಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಹನೆ ಮತ್ತು ತಾಳ್ಮೆ ಮಹಿಳೆಯ ಅತಿದೊಡ್ಡ ಶಕ್ತಿ. ಅವಿಭಕ್ತ ಕುಟುಂಬಗಳಿಗೆ ಮಾತೃತ್ವದ ಅಂತಃಕರಣವೇ ಚೈತನ್ಯವಾಗಿದೆ ಎಂದು ಬಿವಿವಿ ಸಂಘದ ಅಕ್ಕನ ರುದ್ರಬಳಗದ ಅಧ್ಯಕ್ಷೆ ರಾಜೇಶ್ವರಿ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುಟುಂಬದ ಖುಷಿಯೇ ತನ್ನ ಖುಷಿ ಎಂದು ಭಾವಿಸಿ ಸಹನೆ, ತಾಳ್ಮೆಯಿಂದ ಕುಟುಂಬ ನಿರ್ವಹಣೆ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ತನ್ನ ಮಾತೃತ್ವದ ಅಂತಃಕರಣದ ಶಕ್ತಿಯಿಂದ ಇಂದಿಗೂ ಅವಿಭಕ್ತ ಕುಟುಂಬಗಳಿಗೆ ಚೈತನ್ಯಶೀಲವಾಗಿರುವುದು ಮಹಿಳೆ. ಹಿಂದು ಸಂಸ್ಕೃತಿಯಲ್ಲಿ ಮಹಿಳೆಗೆ ದೇವತೆ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವಿದ್ದರೂ ನಮ್ಮ ದೇಶದ ಮಹಿಳೆ ತನ್ನ ಒಡಲ ಶಕ್ತಿಯಿಂದ ತನ್ನ ಗೌರವಯುತ ಶ್ರೀಮಂತವಾದ ದೇಸಿ ಸಂಸ್ಕೃತಿ ಉಳಿಸಿಕೊಂಡಿದ್ದಾಳೆ. ಆಧುನಿಕ ಯುಗದ ಎಲ್ಲ ರಂಗದಲ್ಲೂ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಕುಟುಂಬದ ಆರೋಗ್ಯ, ಕುಟುಂಬದ ಸೌಂದರ್ಯ ಮನೆಯ ಅಡುಗೆಮನೆಯಲ್ಲಿ ಅಡಗಿದೆ. ಇಂದಿನ ವಿದ್ಯಾರ್ಥಿನಿಯರು ಮನೆಯ ಅಹಾರ ಪದಾರ್ಥ ಬಳಸಬೇಕು. ಅದರಲ್ಲಿ ಆರೋಗ್ಯ ಹಾಗೂ ಸೌಂದರ್ಯವರ್ಧಕ ಔಷಧಿ ಅಡಗಿದೆ ಎಂದರು.

ಉಪನ್ಯಾಸ ನೀಡಿದ ಡಾ.ವಿಜಯಲಕ್ಷ್ಮೀ, ಸಮಾನತೆ ಹೋರಾಟದಲ್ಲಿ ಮಹಿಳೆ ತೊಡಗಿಸಿಕೊಳ್ಳಬೇಕು. ಸ್ತ್ರೀ ಇಲ್ಲದೆ ಇಂದು ಭಾರತವಿಲ್ಲ, ಪ್ರಕೃತಿ ಸ್ತ್ರೀಯರಿಗೆ ಸೌಂದರ್ಯ ನೀಡಿದೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಹಾಗೂ ಪುರುಷರ ಪಾತ್ರ ಬಹಳ ಮುಖ್ಯವಾಗಿದೆ ಎಂದರು. ಉಪನ್ಯಾಸಕಿ ಡಾ.ಜಯಲಕ್ಷ್ಮೀ ಮಾತನಾಡಿ, ಮಹಿಳೆಯರು ಹೋಮಿಯೋಪಥಿ ಸೌಂದರ್ಯ ವರ್ಧಕಗಳನ್ನು ಬಳಸುವಂತೆ ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಅರುಣ ಹೂಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಕುರಿತು ಮಾಹಿತಿ ನೀಡಿದರು. ನಗರಸಭೆ ಸದಸ್ಯೆ ಡಾ.ರೇಖಾ ಕಲಬುರ್ಗಿ, ಶೋಭಾ ರಾವ್, ಶಿವಲೀಲಾ ಪಟ್ಟಣಶಟ್ಟಿ ಉಪಸ್ಥಿತರಿದ್ದರು.

ವೈದ್ಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಹವಾಲ್ದಾರ್‌, ವಾಣಿಶ್ರೀ ಗಚ್ಚಿನಕಟ್ಟಿ, ನೇಹಾ ಮಾಶ್ಯಾಳ ಪ್ರಾರ್ಥಿಸಿದರು. ಡಾ.ರವಿ ಕೋಟೆಣ್ಣವರ ಸ್ವಾಗತಿಸಿದರು. ಡಾ.ಶ್ವೇತಾ ಪಾಟೀಲ ವಂದಿಸಿದರು. ಡಾ.ಕೀರ್ತಿ ಚಾವಡಾ ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮಿ ಪೂಜಾರ, ಡಾ.ಸುಧೀರ ಬೆಟಗೇರಿ, ಡಾ.ಅಮರೇಶ ಬಳಗಾನೂರ ಬೋಧಕ -ಬೋಧಕೇತರ ಸಿಬ್ಬಂದಿ, ಅಕ್ಕನ ಬಳಗದ ಸದಸ್ಯೆಯರು, ವೈದ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುಂಚೆ ಬಿವಿವಿ ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಹೊರತಂದಿರುವ ಹೋಮಿಯೋಪಥಿ ಸೌಂಧರ್ಯವರ್ಧಕ ಉತ್ಪನ್ನಗಳ ಮಳಿಗೆ ಉದ್ಘಾಟಿಸಿದರು.