ಕ್ಯಾನ್ಸರ್‌ ಗೆದ್ದ ಮಕ್ಕಳು ಮತ್ತು ಕುಟುಂಬ ಸಮ್ಮಿಲನ

| Published : Feb 17 2025, 12:32 AM IST

ಸಾರಾಂಶ

, ಮಕ್ಕಳಲ್ಲಿ ಕ್ಯಾನ್ಸರ್ ರೋಗವನ್ನು ಕಾಣುವುದು ಬಹಳ ಬೇಸರದ ವಿಷಯ. ಆದರೆ ಈ ಮಕ್ಕಳು ತೋರುವ ಧೈರ್ಯ ಮಾತ್ರ ಅಸಾಧಾರಣವಾದುದು

ಕನ್ನಡಪ್ರಭ ವಾರ್ತೆ ಮೈಸೂರು

ಅಂತಾರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನದ ಪ್ರಯುಕ್ತ ಮೈಸೂರಿನ ನಾರಾಯಣ ಆಸ್ಪತ್ರೆಯು ಮೈಸೂರಿನ ದಿ ಏಟ್ರಿಯಮ್ ಬೊಟಿಕ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬಾಲ್ಯದ ಕ್ಯಾನ್ಸರ್ ಗೆದ್ದವರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಗೆದ್ದ 30ಕ್ಕೂ ಹೆಚ್ಚು ಮಕ್ಕಳು ಮತ್ತು ಅವರ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು ಮತ್ತು ತಮ್ಮ ಸ್ಫೂರ್ತಿದಾಯಕ ಕತೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಐಎಪಿ ಮೈಸೂರು 2025ರ ಅಧ್ಯಕ್ಷರು ಮತ್ತು ಪೀಡಿಯಾಟ್ರಿಕ್ ಕನ್ಸಲ್ಟೆಂಟ್ ಡಾ.ಬಿ.ಎಚ್‌. ಶ್ರೀನಿವಾಸ್ ಮತ್ತು ಮೈಸೂರಿನ ನಾರಾಯಣ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ.ಎಂ.ಎನ್‌. ರವಿ ಹಾಗೂ ಐಎಪಿ ಮೈಸೂರು 2025ರ ಕಾರ್ಯದರ್ಶಿ ಡಾ. ಯಶವಂತ್ ರಾಜು ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಪುಟಾಣಿಗಳ ಧೈರ್ಯ ಶ್ಲಾಘಿಸಲಾಯಿತು.

ಚಿಕಿತ್ಸೆ ಹೊರತಾಗಿ ಅವರಿಗೆ ಭಾವನಾತ್ಮಕ, ಔಷಧೀಯ ನೆರವು ನೀಡುವ ಕುರಿತು ಚರ್ಚಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ಬಿ.ಎಚ್‌. ಶ್ರೀನಿವಾಸ್‌, ಮಕ್ಕಳಲ್ಲಿ ಕ್ಯಾನ್ಸರ್ ರೋಗವನ್ನು ಕಾಣುವುದು ಬಹಳ ಬೇಸರದ ವಿಷಯ. ಆದರೆ ಈ ಮಕ್ಕಳು ತೋರುವ ಧೈರ್ಯ ಮಾತ್ರ ಅಸಾಧಾರಣವಾದುದು. ಅತ್ಯಾಧುನಿಕ ಚಿಕಿತ್ಸೆ, ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲದಿಂದ ಕ್ಯಾನ್ಸರ್ ನಿಂದ ಗುಣಮುಖರಾಗುವ ಕಡೆ ಸಾಗಬಹುದು. ಇವತ್ತಿನ ಈ ಕಾರ್ಯಕ್ರಮವು ಯಾವ ಮಗುವೂ ಒಂಟಿಯಲ್ಲ, ಎಲ್ಲರೂ ಜೊತೆಯಾಗಿ ಈ ಹೋರಾಟ ಮಾಡಬಹುದು ಎಂಬುದನ್ನು ಯಶಸ್ವಿಯಾಗಿ ಸಾರಿದೆ ಎಂದು ಹೇಳಿದರು.

ಡಾ.ಎಂ.ಎನ್‌. ರವಿ ಮಾತನಾಡಿ, ಬಾಲ್ಯದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವುದು ಎಂದರೆ ಕೇವಲ ವೈದ್ಯಕೀಯ ಕೆಲಸ ಮಾಡುವುದಷ್ಟೇ ಅಲ್ಲ. ಬದಲಿಗೆ ಪ್ರತೀ ಹಂತದಲ್ಲೂ ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಮಾಡಬೇಕು. ಅವರು ನಿರಾಳವಾಗಿ ಇರಬೇಕು. ಆ ನಿಟ್ಟಿನಲ್ಲಿ ನಾರಾಯಣ ಆಸ್ಪತ್ರೆಯು ಅತ್ಯದ್ಭುತ ವಾತಾವರಣ ನಿರ್ಮಿಸಿದ್ದು, ಮಕ್ಕಳು ಮತ್ತು ಅವರ ಕುಟುಂಬಕ್ಕೆ ಬೇಕಾದ ನೆರವು ಒದಗಿಸಿ ದೊಡ್ಡ ಧೈರ್ಯವಾಗಿ ನಿಲ್ಲಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಡಾ. ತರಂಗಿಣಿ ದುರುಗಪ್ಪ ಮಾತನಾಡಿ, ಸೂಕ್ತ ಸಮಯದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವುದು ಮತ್ತು ಸರಿಯಾದ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್ ನಿಂದ ಮುಕ್ತಿ ಹೊಂದಬಹುದು. ಈಗ ಸಾಕಷ್ಟು ಅರಿವು ಮತ್ತು ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಯಿಂದ ಕ್ಯಾನ್ಸರ್ ಗೆಲ್ಲುವವರ ಸಂಖ್ಯೆ ಹೆಚ್ಚಾಗಿದೆ. ಚಿಕಿತ್ಸೆಯ ನಂತರ ಭಾವನಾತ್ಮಕ ನೆರವು ಬಹಳ ಮುಖ್ಯ. ಹಾಗಾಗಿ ಇಂಥಾ ಸ್ನೇಹ ಸಮ್ಮಿಲನಗಳು ಬಹಳ ಮುಖ್ಯವಾಗಿವೆ ಎಂದು ಹೇಳಿದರು.