ಎಐಟಿಯಲ್ಲಿ ಜು.24 ರಿಂದ ಅಂತರಾಷ್ಟ್ರೀಯ ಸಮ್ಮೇಳನ

| Published : Jul 24 2024, 12:28 AM IST

ಸಾರಾಂಶ

ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ಸಿ.ಟಿ. ಜಯದೇವ್‌ ಮಾತನಾಡಿದರು. ಡಾ. ಪುಷ್ಪ ರವಿಕುಮಾರ್‌, ಅರ್ಪಿತಾ, ಸಂಗಾರೆಡ್ಡಿ ಇದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದ ಪ್ರತಿಷ್ಠಿತ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ ಮಾಹಿತಿ ತಂತ್ರಜ್ಞಾನದಲ್ಲಿ ಆಗುತ್ತಿರುವ ಅಭಿವೃದ್ಧಿ ಹಾಗೂ ಬೆಳವಣಿಗೆಗಳ ಕುರಿತು 2ನೇ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಇದೇ ಜು.24 ರಿಂದ 27ರವರೆಗೆ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ ಜಯದೇವ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ನಡೆಯಲಿರುವ ಸಮ್ಮೇಳನದ ಉದ್ಘಾಟನೆಯನ್ನು ಜು.25 ರಂದು ಬೆಳಗ್ಗೆ 9.30ಕ್ಕೆ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಅವರು ನೆರವೇರಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ವಹಿಸಲಿದ್ದು, ಶೃಂಗೇರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಗುಣನಾಥ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ವಿದ್ಯಾಶಂಕರ, ಬೆಂಗಳೂರಿನ ಐಇಇಇ ಅಧ್ಯಕ್ಷ ಡಾ.ಟಿ.ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್.ಎಸ್ ರಾಮೇಗೌಡ, ಎಐಟಿ ರಿಜಿಸ್ಟ್ರರ್ ಡಾ.ಸಿ.ಕೆ. ಸುಬ್ಬರಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ನವದೆಹಲಿಯ ಟೆಸ್ಟ್‌ ಪ್ಯಾನ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ನ ಸಿಇಒ ರಾಜೇಶ್ ಸೇಠಿಯಾ ಮುಖ್ಯ ಭಾಷಣಕಾರರಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪ ರವಿಕುಮಾರ್ ಮಾತನಾಡಿ, ಈ ಸಮ್ಮೇಳನದಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಲು ಅಮೇರಿಕಾ, ಆಸ್ಟ್ರೇಲಿಯಾ, ನಾರ್ವೆ, ಇರಾನ್, ಇರಾಕ್ ದೇಶಗಳಿಂದ ಸಂಶೋಧನಾ ಲೇಖನಗಳು ಬಂದಿದ್ದು ಭಾರತದ ವಿವಿಧ ರಾಜ್ಯಗಳಾದ ಕರ್ನಾಟಕ, ಪಂಜಾಬ್, ಉತ್ತರಪ್ರದೇಶ, ದೆಹಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಒಡಿಸ್ಸಾ, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಆಂದ್ರಪ್ರದೇಶ ಮುಂತಾದ ಕಡೆಗಳಿಂದ ಸುಮಾರು 1042 ಸಂಶೋಧನಾ ಲೇಖನಗಳು ಸಲ್ಲಿಕೆಯಾಗಿವೆ ಎಂದರು.

ಇವುಗಳಲ್ಲಿ ಪ್ರಮುಖವಾಗಿ 354 ಸಂಶೋಧನಾ ಲೇಖನಗಳನ್ನು ಖುದ್ದಾಗಿ ಪ್ರಸ್ತುತಪಡಿಸಲು ಆಯ್ಕೆಮಾಡಲಾಗಿದೆ. ಒಟ್ಟು 2 ದಿನಗಳ ಕಾಲ ಏಕಕಾಲಕ್ಕೆ 8 ಸ್ಥಳಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಲೇಖನಗಳನ್ನು ವಿಷಯ ಪರಿಣಿತರ ಮುಂದೆ ಪ್ರಸ್ತುತ ಪಡಿಸಲಿದ್ದು, ಎಐಟಿ ಕಾಲೇಜಿನ 42 ವಿದ್ಯಾರ್ಥಿಗಳು ಈ ಸಂಶೋಧನಾ ಲೇಖನಗಳಲ್ಲಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಜು.26 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಗುಣನಾಥ ಶ್ರೀ ಉಪಸ್ಥಿತರಿರುತ್ತಾರೆ. ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಟಿ ರಾಜು, ಬಿಜಿಎಸ್‌ಐಟಿ ಬಿ.ಜಿ. ನಗರ ಪ್ರಾಂಶುಪಾಲರಾದ ಡಾ. ಶೋಭಾ, ಬೆಂಗಳೂರಿನ ಬಿಜಿಎಸ್‌ಸಿಇಟಿ ಪ್ರಾಂಶುಪಾಲರಾದ ರವಿಕುಮಾರ್, ಡಾ. ಸಿ.ಕೆ. ಸುಬ್ಬರಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಎಂದರು.

ಈ ವೇಳೆ ಕಾಲೇಜು ಆಡಳಿತ ಮಂಡಳಿಯ ಕೆ.ಮೋಹನ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಸಾಗರ್, ಅನ್ಸರ್ ಪಾಷ, ಅರ್ಪಿತಾ, ಸಂಗಾರೆಡ್ಡಿ ಉಪಸ್ಥಿತರಿದ್ದರು.