ಉಜಿರೆ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

| Published : May 13 2025, 01:14 AM IST

ಉಜಿರೆ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಗೆ ‘ಬಾಡಿ ಹೀಲ್ಸ್ ಇಟ್‌ಸೆಲ್ಫ್‌ ಆ್ಯಂಡ್‌ ರಿಟರ್ನ್ಸ್ ಟು ನೇಚರ್‌’ ಘೋಷ ವಾಕ್ಯದೊಂದಿಗೆ ಐದು ದಿನಗಳ ಮೂರನೆ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಶಿಕ್ಷಣವನ್ನು ಪ್ರಾರಂಭದಲ್ಲಿ ಉಜಿರೆಯಲ್ಲಿ ಪ್ರಾರಂಭಿಸಿದ ಬಳಿಕ, ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಚಿಕಿತ್ಸೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಗೆ ‘ಬಾಡಿ ಹೀಲ್ಸ್ ಇಟ್‌ಸೆಲ್ಫ್‌ ಆ್ಯಂಡ್‌ ರಿಟರ್ನ್ಸ್ ಟು ನೇಚರ್‌’ ಘೋಷ ವಾಕ್ಯದೊಂದಿಗೆ ಆಯೋಜಿಸಿರುವ ಐದು ದಿನಗಳ ಮೂರನೆ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜ್ಞಾನ ಮುಂದುವರಿಯುತ್ತಿದೆ. ಜನರಿಗೆ ಆರೋಗ್ಯ ಸಮಸ್ಯೆಯಾದರೆ ವೈದ್ಯರ ಬಳಿ ಹೋಗಿ, ನಾವು ಹಣ ನೀಡುತ್ತೇವೆ ನಮಗೆ ಆರೋಗ್ಯ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ ನಮ್ಮ ನ್ಯಾಚುರೋಪತಿ ಮತ್ತು ಆಯುರ್ವೇದ ಕಾಲೇಜಿನಲ್ಲಿ ದೇಹವು ತಾನಾಗಿಯೇ ಹೇಗೆ ಗುಣಮುಖವಾಗುತ್ತದೆ ಎಂದು ಹೇಳಿಕೊಡುತ್ತೇವೆ ಎಂದರು. ಧರ್ಮಸ್ಥಳದ ಆಶ್ರಯದಲ್ಲಿ ಶಾಂತಿವನ, ಮಣಿಪಾಲದ ಬಳಿಕ ಪರೀಕಾದಲ್ಲಿ ಕ್ಷೇಮವನ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಸೌಖ್ಯವನ ಎಂಬ ಮೂರು ಪ್ರಕೃತಿಚಿಕಿತ್ಸಾ ಆಸ್ಪತ್ರೆಗಳನ್ನು ನಡೆಸುತ್ತಿದ್ದು ಎಲ್ಲವೂ ಸಾಧಕರಿಂದ ಭರ್ತಿಯಾಗಿವೆ. ದೇಹಕ್ಕೆ ರೋಗ ನಿರೋಧಕ ಶಕ್ತಿ ಇದೆ, ಮರಳಿ ಪ್ರಕೃತಿಗೆ ಎಂಬ ತತ್ವದಡಿ ಮೂರು ಆಸ್ಪತ್ರೆಗಳಲ್ಲಿ ಔಷಧಿ ರಹಿತ ಶುಶ್ರೂಷೆ ಮೂಲಕ ಜನರು ಪೂರ್ಣ ಆರೋಗ್ಯಭಾಗ್ಯವನ್ನು ಹೊಂದುತ್ತಿದ್ದಾರೆ ಎಂದು ಹೆಗ್ಗಡೆ ಸಂತಸ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟಿಸಿದ ಬೆಂಗಳೂರಿನ ಎಸ್‌ವಿವೈಎಎಸ್‌ಎಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಆರ್. ನಾಗೇಂದ್ರ ಮಾತನಾಡಿ, ಇಂದಿನ ಜಗತ್ತು ಹಲವು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದೆ. ಆದರೆ ಅವೆಲ್ಲವೂ ಕೇವಲ ಆಧುನಿಕ ವೈದ್ಯಕೀಯ ಚಿಕಿತ್ಸೆಯಿಂದ ಗುಣವಾಗುವುದಿಲ್ಲ. ಆಧುನಿಕ ಚಿಕಿತ್ಸೆಗಳ ಕೊಡುಗೆ ಜಗತ್ತಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಮಾಹಿತಿ ಕೊರತೆ, ಆಧುನಿಕ ಜೀವನಶೈಲಿ ಹಾಗೂ ಆಹಾರ-ವಿಹಾರದ ವಿಧಾನದಿಂದ ಇಂದು ಜನರು ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮೊದಲಾದ ಭೀಕರ ರೋಗಗಳಿಗೆ ಬಲಿಯಾಗುತ್ತಾರೆ. ಅಲೋಪತಿ, ಪ್ರಾಚೀನ ಪಾರಂಪರಿಕ ಚಿಕಿತ್ಸಾ ಪದ್ಧತಿ ಹಾಗೂ ಆಧುನಿಕ ಸಂಶೋಧನೆಗಳ ಫಲಿತಾಂಶ ಅಳವಡಿಸಿ ರೋಗ ಗುಣಪಡಿಸಲು ಸಮಗ್ರತೆಯ ಚಿಕಿತ್ಸಾ ಪದ್ಧತಿ ಅಳವಡಿಸಬೇಕು ಎಂದು ಅವರು ಸಲಹೆ ನೀಡಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ‘ಕಂಪೋಡಿಯಂ ಆಫ್‌ ಡಿಫೆರಂಟ್‌ ಡಿಸೀಸಸ್‌’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಎಲ್ಲಡೆ ಜನಪ್ರಿಯವಾಗುತ್ತಿದೆ. ಆಯುಷ್ ಇಲಾಖೆ ಆಶ್ರಯದಲ್ಲಿ ದಕ್ಷಿಣ ಕನ್ನಡದಲ್ಲಿಯೂ ಒಂದು ಸಾಂಪ್ರದಾಯಿಕ ಕೇಂದ್ರ ತೆರೆಯುವ ಉದ್ದೇಶವಿದೆ ಎಂದರು.

‘ಡಿಕ್ಟೆಟರಿ ಆಫ್‌ ನ್ಯಾಚುರೋಪತಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಐಎನ್‌ವೈಜಿಎಂಎ ಬೆಂಗಳೂರಿನ ರಾಷ್ಟ್ರೀಯ ಅಧ್ಯಕ್ಷ ಡಾ. ನವೀನ್‌ ಕೆ.ವಿ, ಅವರು

ಹಲವರು ನ್ಯಾಚುರೋಪತಿಯನ್ನು ಅನುಮಾನಿಸುತ್ತಾರೆ. ಆದರೆ ಇಷ್ಟು ವರ್ಷಗಳ ನನ್ನ ಅನುಭವದ ಪ್ರಕಾರ ನ್ಯಾಚುರೋಪತಿ ಮೂಲಕ ರೋಗ ಗುಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಎಸ್‌ವಿವೈಎಎಸ್‌ಎ ಉಪಕುಲಪತಿ ಡಾ.ಎನ್‌ ಕೆ ಮಂಜುನಾಥ್‌ ಮಾತನಾಡಿ, ನಮ್ಮ ಭಾರತೀಯ ಸನಾತನ ಆಯುರ್ವೇದ ಮತ್ತು ನ್ಯಾಚುರೋಪತಿ ಪದ್ಧತಿಗಳು ಬೇರೆ ಬೇರೆ ದೇಶಗಳಲ್ಲಿ ಇಂದು ಪ್ರಸಿದ್ಧಿ ಪಡೆಯುತ್ತಿದೆ ಎಂದರು.

ಕುಲಪತಿ ಡಾ. ಎಚ್.ಆರ್. ನಾಗೇಂದ್ರ ಅವರಿಗೆ ‘ಜೀವಮಾನದ ವಿಶೇಷ ಸಾಧಕ’ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್‌ಐಎನ್‌ವೈ ಕೊಚ್ಚಿಯ ನಿರ್ದೇಶಕ ಡಾ.ಬಾಬು ಜೋಸೆಫ್‌, ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್‌, ಎಸ್‌ಡಿಎಂ ನ್ಯಾಚುರೋಪತಿ ಮತ್ತು ಯೋಗಿಕ್‌ ಸೈನ್ಸ್‌ ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಇದ್ದರು.ಬೆಂಗಳೂರಿನ ಡಾ. ನವೀನ್ ಕೆ.ವಿ., ಡಾ. ಬಾಬು ಜೋಸೆಫ್, ಡಾ. ಮಂಜುನಾಥ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಹಾಜರಿದ್ದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಶೆಟ್ಟಿ ವಂದಿಸಿದರು.

ಡಾ. ಬಿಂದು, ಡಾ. ದೀಪಿಕಾ, ಅನನ್ಯಾ ಮತ್ತು ಪ್ರತೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.