ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಎಸ್.ಡಿ.ಎಂಐಎಂಡಿ ಸಂಸ್ಥೆಯು ನವಯುಗದ ಮಾರುಕಟ್ಟೆ- ಡಿಜಿಟಲ್ ಮಾರ್ಪಾಡಿನ ಯುಗದಲ್ಲಿ ಮಾರುಕಟ್ಟೆ: ಸುಸ್ಥಿರ ಯಶಸ್ಸಿಗಾಗಿ ಕಾರ್ಯತಂತ್ರ ವಿಷಯ ಕುರಿತು ಆಯೋಜಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನವು ಮಾರುಕಟ್ಟೆ ಕ್ಷೇತ್ರದಲ್ಲಿನ ನವೋದ್ಯಮಿಗಳ ಸಂಗಮವಾಗಿದೆ.
ಕೋಯಿಕ್ಕೋಡ್ ನ ಐಐಎಂ ಮಾರುಕಟ್ಟೆ ವಿಭಾಗದ ಪ್ರಾಧ್ಯಾಪಕ ಡಾ. ಆನಂದಕುಟ್ಟನ್ ಬಿ. ಉನ್ನಿತನ್ ಮತ್ತು ಐಐಎಫ್‌ಎಲ್ ಸಮಸ್ತದ ಉಪ ಸಿಇಒ ಮನೋಜ್ ಫಸಂಘ ಸಮ್ಮೇಳನ ಉದ್ಘಾಟಿಸಿದರು.ಡಿಜಿಟಲ್ ಯುಗದಲ್ಲಿ ಮಾರುಕಟ್ಟೆಗೆ ಉಜ್ವಲ ಭವಿಷ್ಯವಿದೆ ಎಂದು ಸಂಕೇತಿಸುತ್ತಿರುವ ವಾತಾವರಣ ಅಲ್ಲಿ ಸೃಷ್ಟಿಯಾಯಿತು.
ಸಮ್ಮೇಳನದ ಮುಖ್ಯಸ್ಥ ಡಾ. ಕೀರ್ತನ್ ರಾಜ್ ಅವರು ಸಮ್ಮೇಳನದ ವಿಷಯ ಪರಿಚಯಿಸಿ, ಕ್ರಿಯಾತ್ಮಕವಾದ ನವಯುಗದ ಮಾರುಕಟ್ಟೆ ಆವಿಷ್ಕಾರ ಮತ್ತು ಅಭಿವೃದ್ಧಿಯ ವಿಷಯ ಕುರಿತು ಪ್ರಸ್ತುತಗೊಳ್ಳುತ್ತಿರುವ ಎಂಭತ್ತು ಉತ್ತಮ ಲೇಖನಗಳ ಕುರಿತು ಅವರು ತಿಳಿಸಿಕೊಟ್ಟರು.ಸಂಸ್ಥೆಯ ನಿರ್ದೇಶಕ ಡಾ. ಎಸ್. ಎನ್. ಪ್ರಸಾದ್ ಸ್ವಾಗತಿಸಿದರು. ಸಮ್ಮೇಳನದ ಪ್ರಮುಖ ಭಾಷಣಕಾರ ಡಾ. ಆನಂದಕುಟ್ಟನ್ ಬಿ. ಉನ್ನಿತನ್ ಮಾತನಾಡಿ, ಹಿಂದಿನ ಮತ್ತು ಇಂದಿನ ಮಾರುಕಟ್ಟೆ ಪರಿಕರಗಳ ನಡುವೆ ಸಮಾನಾಂತರಗಳನ್ನು ಗುರುತಿಸುವುದು, ಡಿಜಿಟಲ್ ಅಡಚಣೆಗಳ ಪರಿಣಾಮ ಮತ್ತು ಬ್ಯಾಂಕಿಂಗ್ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಆಗಿರುವ ಬೃಹತ್ ಬದಲಾವಣೆ ಕುರಿತು ತಿಳಿಸಿಕೊಟ್ಟರು. ಗ್ರಾಹಕರ ಪರಿವರ್ತನೆಯ ಕಲೆ ಮತ್ತು ಸಂಪರ್ಕಿತ ತಂತ್ರಜ್ಞಾನಗಳ ಮುನ್ಸೂಚಕ ಸಾಮರ್ಥ್ಯ - ವಿಷಯಗಳ ಕುರಿತ ಅವರ ಮಾತು ಪ್ರಭಾವ ಬೀರಿತು.
ಮನೋಜ್ ಪಸಂಗ ಮಾತನಾಡಿ, ಬದಲಾಗುತ್ತಿರುವ ಮಾಧ್ಯಮಗಳ ನಡುವೆ ಮಾರುಕಟ್ಟೆ ತತ್ವಗಳ ಸ್ಥಿರತೆ, ಗ್ರಾಹಕರ ನಡವಳಿಕೆಯಲ್ಲಿ ಆಗಿರುವ ಬದಲಾವಣೆ, ಮತ್ತು ದತ್ತಾಂಶ ವಿಶ್ಲೇಷಣೆ ಕುರಿತು ಮಾತನಾಡಿದರು.ಡಿಜಿಟಲ್ ಯುಗಕ್ಕೆ ಬೇಕಾದ ಪ್ರಮುಖ ತಂತ್ರಗಳು, ವಿಷಯ ಮಾರುಕಟ್ಟೆಯಿಂದ ಸರ್ಚ್ ಎಂಜಿನ್ ಮಾರ್ಕೆಟಿಂಗ್ ವರೆಗಿನ ಬದಲಾವಣೆ, ಹೊಂದಿಕೊಳ್ಳುವಿಕೆ ಮತ್ತು ಗ್ರಾಹಕ- ಕೇಂದ್ರಿತ ವಿಧಾನಗಳು - ಕುರಿತು ಅವರು ಬೆಳಕು ಚೆಲ್ಲಿದರು.
ಮಾರ್ಕೆಟಿಂಗ್ ಒಳನೋಟ ಕುರಿತು ಅನೇಕ ಬಗೆಯ ಉತ್ತಮ ಲೇಖನಗಳು ಸಮ್ಮೇಳನದಲ್ಲಿ ಮಂಡಿಸಲ್ಪಟ್ಟವು. ಸಮ್ಮೇಳನದ ಸಮಾರೋಪ ಸಮಾರಂಭವು ಜ. 19 ರಂದು ನಡೆಯಲಿದೆ.