ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿಯಿಂದ ಸತ್ಯಾಗ್ರಹ, ಹಕ್ಕೊತ್ತಾಯ ಮಂಡನೆ

| Published : Mar 23 2025, 01:33 AM IST

ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿಯಿಂದ ಸತ್ಯಾಗ್ರಹ, ಹಕ್ಕೊತ್ತಾಯ ಮಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆ ಕೊಡವ ಲ್ಯಾಂಡ್‌ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ಮಂಡಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿದ ಸಂಘಟನೆಯ ಸದಸ್ಯರು ಕೊಡವರ ಪರವಾದ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಸಿಎನ್‌ಸಿ ಸಂಘಟನೆ ಕಳೆದ 35 ವರ್ಷಗಳಿಂದ ಸಂವಿಧಾನಬದ್ಧವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಂತಿಯುತವಾಗಿ ಹೋರಾಟ ನಡೆಸುತ್ತಿದೆ. ಖ್ಯಾತ ಅರ್ಥಶಾಸ್ತ್ರಜ್ಞ, ಹಾರ್ವರ್ಡ್ ವಿದ್ವಾಂಸ ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಸಿಎನ್‌ಸಿ ಜಂಟಿಯಾಗಿ ಕರ್ನಾಟಕ ಹೈಕೋರ್ಟ್ನಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದು, ಕಾನೂನುಬದ್ಧ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ಹೇಳಿದರು.

1966 ರ ಹೆಲ್ಸಿಂಕಿ ಕಾನೂನಿನ ಆಧಾರದ ಮೇಲೆ ಕೊಡವಲ್ಯಾಂಡ್ ಗೆ ಕಾವೇರಿ ನೀರಿನ ಪ್ರಮುಖ ಪಾಲನ್ನು ಹಂಚಿಕೆ ಮಾಡಬೇಕು. ಕಾವೇರಿ ನದಿಯನ್ನು ಜೀವಂತ ಅಸ್ತಿತ್ವದ ಸ್ಥಿತಿ ಎಂದು ಪರಿಗಣಿಸಿ ಕಾನೂನುಬದ್ಧವಾಗಿ ರಕ್ಷಿಸಬೇಕು.

ಕೊಡವರ ನರಮೇಧದ ದೇವಟ್ ಪರಂಬು, ನಾಲ್ನಾಡ್ ಅರಮನೆ, ನಗರೀಕುಂಡ್ ಮತ್ತು ಮಡಿಕೇರಿ ಕೋಟೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಸ್ಮಾರಕ ಸ್ಮಾರಕವನ್ನು ಸ್ಥಾಪಿಸಬೇಕು. ಅವುಗಳನ್ನು ಅಂತರರಾಷ್ಟ್ರೀಯ ಪರಂಪರೆಯ ತಾಣಗಳಾಗಿ ಗುರುತಿಸಿ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಪರಿಚಯಿಸಬೇಕು. ಕೊಡವ ಮಂದ್ ಗಳನ್ನು ಕೊಡವ ಜನಾಂಗದ ಆಧ್ಯಾತ್ಮಿಕ ಸ್ಥಾನವೆಂದು ಘೋಷಿಸಬೇಕು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವವನ್ನು ಗೌರವಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು.

ರೇಖಾ ನಾಚಪ್ಪ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಮಂದಪಂಡ ಮನೋಜ್, ಕಾಂಡೇರ ಸುರೇಶ್, ಕಾಟುಮಣಿಯಂಡ ಉಮೇಶ್, ಕಿರಿಯಮಾಡ ಶೆರಿನ್, ಕೂಪದಿರ ಸಾಬು, ಪುಟ್ಟಿಚಂಡ ಡಾನ್ ದೇವಯ್ಯ, ಬೇಪಡಿಯಂಡ ಬಿದ್ದಪ್ಪ, ಚೋಳಪಂಡ ನಾಣಯ್ಯ, ಮೇದುರ ಕಂಠಿ ನಾಣ್ಯಪ್ಪ, ಬೊಳ್ಳಜಿರ ಬಿ.ಅಯ್ಯಪ್ಪ, ಮೂಕೊಂಡ ದಿಲೀಪ್, ನಂದೆಟಿರ ರವಿ ಸುಬ್ಬಯ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.