ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಮಾನವ ಸರಪಳಿ ರಚಿಸುವ ಸಂಬಂಧ ಶಾಲಾ-ಕಾಲೇಜಿನ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಎರಡನೇ ಸುತ್ತಿನ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಗುರುವಾರ ಮಡಿಕೇರಿಯಲ್ಲಿ ನಡೆಯಿತು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಹತ್ವ ಕುರಿತು ಹೊರತಂದಿರುವ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, 15ರಂದು ಬೆಳಗ್ಗೆ 9 ರಿಂದ 10 ಗಂಟೆ ವರೆಗೆ ಮಾನವ ಸರಪಳಿ ಆಯೋಜಿಸಬೇಕಿದೆ. ಆ ನಿಟ್ಟಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಸರ್ಕಾರವು ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ಚಾಮರಾಜನಗರದವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಮಾನವ ಸರಪಳಿ ಏರ್ಪಡಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಸಂಪಾಜೆಯಿಂದ ಶಿರಂಗಾಲ ಬಳಿಯ ಗಡಿ ಪ್ರದೇಶದವರೆಗೆ ಮಾನವ ಸರಪಳಿ ಏರ್ಪಡಿಸಬೇಕಿದೆ. ಆ ದಿಸೆಯಲ್ಲಿ ಆಯಾಯ ಗ್ರಾಮ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಎಲ್ಲರೂ ಪಾಲ್ಗೊಂಡು ಸಹಕರಿಸುವಂತೆ ಮನವಿ ಮಾಡಿದರು.15ರಂದು ಬೆಳಗ್ಗೆ 9 ರಿಂದ 10 ಗಂಟೆವರೆಗೆ ಒಂದು ಗಂಟೆ ಕಾರ್ಯಕ್ರಮ ಇರಲಿದೆ. ಜಿಲ್ಲೆಯಲ್ಲಿ ಸಂಪಾಜೆಯಿಂದ ಶಿರಂಗಾಲ ಬಳಿಯ ಗಡಿ ಪ್ರದೇಶದವರೆಗೆ ಸುಮಾರು 77 ಕಿ.ಮೀ. ಮಾನವ ಸರಪಳಿ/ ರಿಲೇ ನಡೆಯಲಿದೆ. ಆ ನಿಟ್ಟಿನಲ್ಲಿ ಪ್ರತೀ 100 ಮೀ.ಗೆ ಒಬ್ಬರಂತೆ ವಿಭಾಗಾಧಿಕಾರಿ, ಪ್ರತೀ ಒಂದು ಕಿ.ಮೀ.ಗೆ ಒಬ್ಬರಂತೆ ಪ್ರದೇಶ ಅಧಿಕಾರಿ, 3 ರಿಂದ 5 ಕಿ.ಮೀ.ವರೆಗೆ ಒಬ್ಬರಂತೆ ತಾಲೂಕು ಮಟ್ಟದ ಅಧಿಕಾರಿ ಜೊತೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರ ಸುರಕ್ಷತೆಗೆ ಸಾಕಷ್ಟು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದು ವೆಂಕಟ್ ರಾಜಾ ತಿಳಿಸಿದರು.
ಮಾನವ ಸರಪಳಿ ಸಂದರ್ಭದಲ್ಲಿ ಸಾರಿಗೆ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯ ಇರುವುದಿಲ್ಲ. ಸುಗಮವಾಗಿ ಸಾರಿಗೆ ಸಂಚಾರ ನಡೆಯಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿ, ಜಿಲ್ಲೆಯ ಸಂಪಾಜೆಯಿಂದ ಶಿರಂಗಾಲ ಗಡಿ ಪ್ರದೇಶದವರೆಗೆ 12 ಗ್ರಾಮ ಪಂಚಾಯಿತಿಗಳು, 1 ನಗರಸಭೆ, 1 ಪುರಸಭೆ ಬರಲಿದ್ದು, ಆಯಾಯ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ, ಗ್ರಾಮ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮಾನವ ಸರಪಳಿ/ರಿಲೇ ಸಂದರ್ಭದಲ್ಲಿ ಸುಮಾರು 30 ಸಾವಿರ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರೂ 15ರಂದು ಬೆಳಗ್ಗೆ 8.30ಕ್ಕೆ ಆಗಮಿಸಬೇಕು ಎಂದು ಕೋರಿದರು.ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಎಲ್ಲರೂ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸುವಂತೆ ಕೋರಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಧನರಾಜ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ- ಕಾಲೇಜಿನ ಮುಖ್ಯಸ್ಥರು, ತಾ.ಪಂ.ಇಒಗಳು ಇತರರು ಇದ್ದರು.;Resize=(128,128))
;Resize=(128,128))