ಹುಬ್ಬಳ್ಳಿ ನಗರದಲ್ಲಿ ಎರಡು ದಿನಗಳ ಕಾಲ ಧಾರವಾಡ ಸಂಸದ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ತೆರೆ ಕಂಡಿತು.
ಹುಬ್ಬಳ್ಳಿ: ನಗರದಲ್ಲಿ ಎರಡು ದಿನಗಳ ಕಾಲ ಧಾರವಾಡ ಸಂಸದ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ತೆರೆ ಕಂಡಿತು.
ಶನಿವಾರ ಗಾಳಿಪಟ ಉತ್ಸವಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಗಾಳಿಪಟ ಹಾರಿಸುವ ಮೂಲಕ ಚಾಲನೆ ನೀಡಿದ್ದರು. ನೆರೆ ರಾಷ್ಟ್ರ, ನೆರೆ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಯಿಂದ ಗಾಳಿಪಟ ಸ್ಪರ್ಧಿಗಳು ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದರು. ಬಾನಂಗಳದಲ್ಲಿ ಹಾರಾಡಿಸಿದ ಬಗೆಬಗೆಯ ಬಣ್ಣ ಬಣ್ಣದ ಗಾಳಿಪಟಗಳು ಸಾರ್ವಜನಿಕರ ಮನಸೆಳೆಯುವಲ್ಲಿ ಯಶಸ್ವಿಯಾದವು.ಹಾಲೆಂಡ್, ಯುಕೆ, ಸೌಥ್ ಯುರೋಪಿಯನ್, ನೆದರ್‌ಲ್ಯಾಂಡ್, ಇಂಡೋನೇಷಿಯಾ, ಗ್ರೀಸ್, ದೇಶದ ಗುಜರಾತ್, ರಾಜಸ್ಥಾನ, ಒಡಿಶಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ 70ಕ್ಕೂ ಹೆಚ್ಚು ಗಾಳಿಪಟ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಭಾನುವಾರದಂದು ನಗರದ ಅನೇಕ ಶಾಲಾ-ಕಾಲೇಜುಗಳ ಚಿಣ್ಣರು ನಾ ಮುಂದು, ತಾ ಮುಂದು ಎನ್ನುತ್ತ ಭಿನ್ನ, ಭಿನ್ನ ಗಾಳಿಪಟಗಳನ್ನು ಹಾರಿಸುತ್ತ ವಿದೇಶಿಗರೊಂದಿಗೆ ಸ್ಪರ್ಧೆಯೊಡ್ಡಿ ಖುಷಿಪಟ್ಟರು. ಯುವಕರು, ಯುವತಿಯರು ಎನ್ನದೇ, ಪುಟಾಣಿ ಮಕ್ಕಳಾದಿಯಾಗಿ ಗಾಳಿಪಟ ತೇಲಿಬಿಟ್ಟು ಶಿಳ್ಳೆ, ಚಪ್ಪಾಳೆ ಹೊಡೆಯುತ್ತ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.ಭಾನುವಾರ ಬೆಳಗ್ಗೆ ಮಹಿಳೆಯರಿಗಾಗಿ ಮ್ಯೂಜಿಕ್ ಚೇರ್, ಕೃಷ್ಣ-ರಾಧೆ ಸೇರಿದಂತೆ ಹಲವು ಕ್ರೀಡೆಗಳು ಮತ್ತು ಸಂಗೀತ ಹಬ್ಬ ಆಯೋಜಿಸಲಾಯಿತು. ನೂರಾರು ಮಹಿಳೆಯಲ್ಲಿ ಈ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಳಿಕ ಬಗೆಬಗೆಯ ಆಹಾರ ಉತ್ಸವ ಮತ್ತು ಪ್ರದರ್ಶನ ನಡೆಯಿತು. ಬಳಿಕ ಎರಡು ದಿನಗಳ ಕಾಲ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಅದೃಷ್ಟ ಬಹುಮಾನ ವಿತರಿಸಲಾಯಿತು.
ಸಂಗೀತ ಸಂಜೆಗೆ ಮನಸೋತ ಜನತೆ: ಧಾರವಾಡ ಸಂಸದ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಹಾಗೂ ಹುಬ್ಬಳ್ಳಿಯ ಗಾನಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ ತಂಡದಿಂದ ವಿಶೇಷ ಸಂಗೀತ ಕಾರ್ಯಕ್ರಮಗಳು ಅಭಿಮಾನಿಗಳನ್ನು ಹೆಚ್ಚುದ್ದು ಕುಣಿಯುವಂತೆ ಮಾಡಿತು. ಮಹನ್ಯಾ ಪಾಟೀಲ ಹಾಗೂ ತಂಡವು ರಾಮ ನಾಮ ಹಾಡಿರೊ... ಅವ್ವ ಕಣೋ ಕನ್ನಡ ನಮ್ಮವ್ವ ಕಣೋ ಕನ್ನಡ... ಮಸ್ತು ಮಸ್ತು ಹುಡ್ಗಿ ಬಂದ್ಲು... ಕಾಣದಾ ಕಡಲಿಗೆ ಹಂಬಲಿಸಿದೆ ಮನ... ಸೇರಿದಂತೆ ಹಲವು ಹಾಡುಗಳನ್ನು ಹಾಡಿ ರಂಜಿಸಿದರು. ಖ್ಯಾತ ಗಾಯಕ ಸೋನು ನಿಗಮ್ ಅವರು ಐಸಾ ಪೆಹಲಿ ಬಾರ ಹುವಾ... ಕುಂಕುಪಾಯ ಹೈ ತೋ ಜೈಸೆ ಖೋಯಾ ಹು... ದೇಖಾ ತುಮ್ ಕೋ ಜಬ್ ಸೆ... ಈ ಸಂಜೆ ಯಾಕಾಗಿದೆ ನೀ ಇಲ್ಲದೇ... ಸೇರಿದಂತೆ ಹಲವು ಹಾಡುಗಳಿಗೆ ಜನರು ಕೇಕೆ, ಶಿಳ್ಳೆ, ಚಪ್ಪಾಳೆ ತಟ್ಟಿಸಂಭ್ರಮಿಸಿದರು. ಜತೆಗೆ ಎದ್ದು ನಿಂತು ಕುಣಿದು ಕುಪ್ಪಳಿಸಿದರು.