ಸಾರಾಂಶ
ಹಾನಗಲ್ಲ: ಅಮೆರಿಕದ ಬೋಸ್ಟನ್ ನಗರದಲ್ಲಿ ರಾಷ್ಟ್ರೀಯ ರಾಜ್ಯ ಶಾಸಕಾಂಗ ಸಮ್ಮೇಳನ (ಎನ್‌ಸಿಎಸ್‌ಎಲ್) ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಶಾಸಕರ ಶೃಂಗ ಸಮ್ಮೇಳನ ಹತ್ತು, ಹಲವು ಅರ್ಥಪೂರ್ಣ ಚರ್ಚೆ, ಚಿಂಥನ-ಮಂಥನದೊಂದಿಗೆ ಉಪಯುಕ್ತವಾಗಿ ಮುಕ್ತಾಯಗೊಂಡಿತು.
ಸಮ್ಮೇಳನದಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಪ್ರತಿನಿಧಿಗಳು ಎಲ್ಲ ಚರ್ಚೆ, ವಿಚಾರ ವಿನಿಮಯದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಹಲವು ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.ಶನಿವಾರ ಪ್ರಕಟಣೆ ನೀಡಿರುವ ಅವರು, ಎನ್‌ಸಿಎಸ್‌ಎಲ್ ಸಂಸ್ಥೆ ಪ್ರತಿವರ್ಷ ಅಮೆರಿಕದಲ್ಲಿ ಸಮ್ಮೇಳನ ನಡೆಸುತ್ತದೆ. ಈ ವರ್ಷ ಸಮ್ಮೇಳನದ ಸುವರ್ಣ ಮಹೋತ್ಸವದ ಅಂಗವಾಗಿ ಭಾರತ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಶಾಸಕರಿಗೆ ಆಹ್ವಾನ ನೀಡಲಾಗಿತ್ತು. ವಿಶೇಷವಾಗಿ ಸಮ್ಮೇಳನದಲ್ಲಿ 130 ಭಾರತೀಯರು ಅದರಲ್ಲಿಯೂ ಕರ್ನಾಟಕದ ಪ್ರತಿನಿಧಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಿತ್ತು. ವಿವಿಧ ದೇಶಗಳ ಕಾನೂನು ತಜ್ಞರು, ವಿಷಯ ಪರಿಣತರು ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದಿದ್ದಾರೆ.
ವಿಶೇಷವಾಗಿ ಕರ್ನಾಟಕದ ಆಡಳಿತ, ಯೋಜನೆ, ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಹಾಗಾಗಿ ಎಲ್ಲರೂ ಕರ್ನಾಟಕದ ಪ್ರತಿನಿಧಿಗಳತ್ತ ನೋಡುವಂತಾಗಿತ್ತು ಎಂದಿರುವ ಶ್ರೀನಿವಾಸ ಮಾನೆ, ವಿಶ್ವದ ನಂ. 1 ಯುನಿವರ್ಸಿಟಿ ಕ್ಯಾಲಿಫೋರ್ನಿಯಾ ರಾಜ್ಯದ ಸ್ಮಾನ್‌ಫೋರ್ಡ್ ಯುನಿವರ್ಸಿಟಿಗೆ ಭೇಟಿ ನೀಡಿ ಅಲ್ಲಿನ ಭಾರತೀಯ ಉಪನ್ಯಾಸಕರಿಬ್ಬರ ಜತೆ ಚರ್ಚೆ ನಡೆಸಿ, ಆರೋಗ್ಯ ಕ್ಷೇತ್ರದ ಹೊಸ ಆವಿಷ್ಕಾರ, ಸಂಶೋಧನೆ ಕುರಿತು ಮಾಹಿತಿ ಪಡೆಯಲಾಯಿತು. ಬೋಸ್ಟನ್‌ನ ಪ್ರತಿಷ್ಠಿತ ಹಾರ್ವರ್ಡ್ ಯುನಿವರ್ಸಿಟಿಗೆ ಸಹ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ಪದ್ಧತಿಯ ಕುರಿತು ಮಾಹಿತಿ ಪಡೆಯಲಾಯಿತು. ಮ್ಯಾಸಾಚುವೇಟ್ಸ್ ರಾಜ್ಯದ ಸರ್ಕಾರದ ಸದನಕ್ಕೆ ತೆರಳಿ ಶಾಸಕಾಂಗ ಪದ್ಧತಿ ಬಗ್ಗೆ ತಿಳಿದುಕೊಳ್ಳಲಾಯಿತು ಎಂದು ಶಾಸಕ ಮಾನೆ ವಿವರಿಸಿದ್ದಾರೆ.ಅಮೆರಿಕದ ಜನ ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಸಮಯಪಾಲನೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಸರ್ಕಾರಕ್ಕೆ ತೆರಿಗೆ ಕಟ್ಟುವ ವಿಷಯದಲ್ಲಿ ಮಾದರಿಯಾಗಿದ್ದಾರೆ. ದುಡಿಮೆಗೆ ಪ್ರಾಮುಖ್ಯತೆ ನೀಡುತ್ತಾರೆ. ಇವೆಲ್ಲ ಕಾರಣಗಳಿಂದ ಅಮೆರಿಕ ಪ್ರಗತಿಯ ಹಾದಿಯಲ್ಲಿ ಸಾಗಿದೆ. ಅಲ್ಲಿನ ಯುವ ಸಮೂಹ ವಿದ್ಯಾಭ್ಯಾಸದ ಜತೆ ಜೊತೆಗೆ 2-3 ಗಂಟೆಗಳ ಕಾಲ ದುಡಿದು ತಮ್ಮ ಖರ್ಚು, ವೆಚ್ಚವನ್ನು ತಾವೇ ನಿಭಾಯಿಸಿಕೊಳ್ಳುತ್ತಾರೆ. ಅಂಥ ಹಲವು ಯುವಕರನ್ನು ಭೇಟಿ ಮಾಡಿ, ಮಾತನಾಡಿಸುವ ಅವಕಾಶ ಸಿಕ್ಕಿತ್ತು ಎಂದಿರುವ ಶ್ರೀನಿವಾಸ ಮಾನೆ, ಅಮೆರಿಕನ್ನರಲ್ಲಿ ದುಡಿಯುವ ತವಕ ಹೆಚ್ಚಿದೆ. ಹಾಗಾಗಿ ಸಹಜವಾಗಿ ಅಲ್ಲಿನ ತಲಾ ಆದಾಯವೂ ಹೆಚ್ಚಿದೆ. ನಮ್ಮ ದೇಶದ ಯುವಕರು ಸಹ ಇದನ್ನು ಅನುಸರಿಸಿ, ಶಿಸ್ತುಬದ್ಧ ಜೀವನ ಸಾಗಿಸಲು ಮುಂದಾದರೆ ನಮ್ಮ ದೇಶ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಿಂದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭೆ ಮತ್ತು ವಿಧಾನಪರಿಷತ್ತಿನ 23 ಶಾಸಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.