ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸೇವೆ ಮಾಡುತ್ತಿರುವ ಸೇವಾ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ತೊಡಗಿಕೊಂಡಿರುವುದು ತುಂಬಾ ಸಂತೋಷದಾಯಕ ಎಂದು ಎಸ್.ಡಿ.ಎಂ ಸಮೂಹ ಸಂಸ್ಥೆಗಳ ಯೋಜನಾ ನಿರ್ದೇಶಕ ಶ್ರೇಯಸ್ ಕುಮಾರ್ ಧರ್ಮಸ್ಥಳ ತಿಳಿಸಿದರು.ನಗರದ ವೈಷ್ಣವಿ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಸಿಬ್ಬಂದಿಗೆ ಯಶಸ್ವಿ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರ ಕಾರ್ಯ ಚಟುವಟಿಕೆಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರು ಬೀದರ್ ನಲ್ಲಿ ನಡೆದ ಕ್ಷೀರಕ್ರಾಂತಿ ಮತ್ತು ನಮ್ಮ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಯುಷ್ಮಾನ್ ಭಾರತಕ್ಕೆ ನಮ್ಮ ಸಂಸ್ಥೆಯ ಕೊಡುಗೆ ಬಗ್ಗೆ ಅಪಾರ ಪ್ರಶಂಶೆ ನೀಡಿದ್ದಾರೆ. ದೇಶಕ್ಕೆ ಇದು ಮಾದರಿ ಯೋಜನೆ ಎಂದಿದ್ದಾರೆ. ಇದಕ್ಕಿಂತ ದೊಡ್ಡ ಸನ್ಮಾನ ನಮಗೆ ಬೇರೆ ಬೇಕಾಗಿಲ್ಲ ಎಂದರು.ನಮ್ಮೂರು ನಮ್ಮ ಕೆರೆ ಯೋಜನೆಯ ಬಗ್ಗೆ ಸಿಕ್ಕಿರುವ ಪ್ರಶಂಸೆ ಮತ್ತು ಜನಗೌರವ ಅಪಾರವಾದದ್ದು, ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಬವಣೆ ಮತ್ತು ಕೃಷಿ ಯೋಜನೆಗಳಿಗೆ ಇದರಿಂದ ದೊಡ್ಡ ಲಾಭವಾಗಿದೆ. ನಮ್ಮ ಪರಂಪರೆ ಸಂಸ್ಕೃತಿ ಉಳಿಸುವ ಯೋಜನೆಗಳು, ಪಾಳು ಬಿದ್ದ ದೇವಸ್ಥಾನಗಳ ಪುನರ್ ನಿರ್ಮಾಣ, ಶಿಕ್ಷಣ ಕ್ಷೇತ್ರದ ಸಾಧನೆ, ಕೃಷಿ ಕ್ಷೇತ್ರಕ್ಕೆ ಕೊಡುಗೆ, ಶುದ್ಧ ಕುಡಿಯುವ ನೀರಿನ ಯೋಜನೆ ಈ ರೀತಿಯಾಗಿ ನಮ್ಮ ಸಂಸ್ಥೆ ನಮ್ಮದೇಶಕ್ಕೆ ನೀಡುತ್ತಿರುವ ಜನಪರ ಯೋಜನೆಗಳ ಪಟ್ಟಿ ಮಾಡುತ್ತಾ ಹೋದರೆ ಕ್ಷೇತ್ರದ ಬಗ್ಗೆ ಮತ್ತು ಪೂಜ್ಯರ ಬಗ್ಗೆ ಹೆಮ್ಮೆ ಅನಿಸುತ್ತದೆ. ಈ ಸಾಧನೆಯ ಬಹುಪಾಲು ಯಶಸ್ಸು ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರು.
ಇಡೀ ಪ್ರಪಂಚದಲ್ಲಿ ವೈಯಕ್ತಿಕವಾಗಿ ಮಾಡುವ ವಿಮಾ ಯೋಜನೆ ನಮ್ಮದಾಗಿದೆ. ಸುಮಾರು 1.5 ಕೋಟಿ ಜನರಿಗೆ ಜೀವ ವಿಮಾ ಮತ್ತು 75 ಲಕ್ಷ ಜನರಿಗೆ ಆರೋಗ್ಯ ವಿಮೆ ಮಾಡಿಸಿ ಮಧ್ಯಮ ವರ್ಗದ ಜನರ ಜೀವನಕ್ಕೆ ಭದ್ರತೆಯನ್ನು ಒದಗಿಸಿದೆ. ಖಾಸಗಿ ಸಂಸ್ಥೆಯೊಂದು ಇಷ್ಟು ದೊಡ್ಡ ಸಂಖ್ಯೆ ವಿಮೆ ಮಾಡಿಸಿರುವದು ರಾಷ್ಟ್ರ ಮಟ್ಟದಲ್ಲಿ ದಾಖಲೆ ಎಂದರು.ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಒಟ್ಟು 1,18,000 ಸ್ವ ಸಹಾಯ ಸಂಘಗಳಿದ್ದು 10,02,000 ಸದಸ್ಯರಿದ್ದರೂ 524.40 ಕೋಟಿ ಉಳಿತಾಯ ಮಾಡುವ ಮೂಲಕ ಗಳಿಸುವುದಕ್ಕಿಂತ ಉಳಿಸುವುದು ಮುಖ್ಯ ಎಂದರು.
ನೆಲ ಜಲ ಸಂರಕ್ಷಣೆಗೆಗಾಗಿ 130 ಕೆರೆಗಳ ಅಭಿವೃದ್ಧಿ, 385 ಶಾಲೆಗಳಿಗೆ ಡೆಸ್ಕ್ ಬೆಂಚು ವಿತರಣೆ, 7822 ವಿದಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ, 42 ಮಂದಿ ವಯೋವೃದ್ಧರಿಗೆ ವಾತ್ಸಲ್ಯ ಮನೆ ನಿರ್ಮಾಣ, 3635 ಸದಸ್ಯರಿಗೆ ಮಾಸಾಶನ ವಿತರಣೆ, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ 10,90,011 ಸೌಲಭ್ಯ ನೀಡಲಾಗಿದೆ ಎಂದರು.ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರ ಆಶಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಮಮತಾ ಹರೀಶ್ ರಾವ್, ಎಚ್.ಎಲ್. ಮುರಳೀಧರ್, ಜಯಕರ ಶೆಟ್ಟಿ, ಕೇಶವ ದೇವಾಂಗ, ಎಂ. ಚೇತನಾ, ಲತಾ ಬಂಗೇರ, ಕೆ. ಚಿದಾನಂದ ಹಾಗೂ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ, ಸಿಬ್ಬಂದಿ ಇದ್ದರು.